ಇಸ್ಲಾಮಾಬಾದ್: ಕೊರೊನಾ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದ ಹಿನ್ನೆಲೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕೊರೊನಾ ಪರೀಕ್ಷೆಗೆ ಒಳಗಾಗಲಿದ್ದಾರೆ.
ವಿಶ್ವದ ಅತಿದೊಡ್ಡ ಸ್ವಯಂಸೇವಕ ಆ್ಯಂಬುಲೆನ್ಸ್ ನೆಟ್‌ವರ್ಕ್ ಎಧಿ(Edhi) ಫೌಂಡೇಶನ್‌ನ ಅಧ್ಯಕ್ಷ ಫೈಸಲ್ ಎಧಿಯನ್ನು ಏಪ್ರಿಲ್ 15 ರಂದು ಇಮ್ರಾನ್ ಖಾನ್ ಭೇಟಿಯಾಗಿದ್ದರು. ಪ್ರಧಾನ ಮಂತ್ರಿಯನ್ನು ಭೇಟಿಯಾದ ನಂತರ, ಫೈಸಲ್ ಅವರಿಗೆ ಜ್ವರದಂತ ರೋಗಲಕ್ಷಣಗಳು ಕಾಣಿಸಿಕೊಂಡಿವೆ. ಕೋವಿಡ್-19 ಪರೀಕ್ಷೆ ನಡೆಸಿದ ನಂತರ ಅವರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.
ಇಮ್ರಾನ್ ಖಾನ್ ಪ್ರಸ್ತುತ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಭಾಗವಹಿಸಿದ್ದು, ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಸಭೆ ಮುಗಿದ ಬಳಿಕ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ಪಾಕಿಸ್ತಾನ ಪತ್ರಿಕೆ ವರದಿ ಮಾಡಿದೆ.
ಸದ್ಯ ಫೈಸಲ್ ಎಧಿ ಆರೋಗ್ಯವಾಗಿದ್ದಾರೆ ಎಂದು ಆತನ ಪುತ್ರ ತಿಳಿಸಿದ್ದಾರೆ. ಎಧಿ ಪಾಕಿಸ್ತಾನ ಪ್ರಧಾನ ಮಂತ್ರಿ ನಿಧಿಗೆ 1 ಕೋಟಿ ದೇಣಿಗೆ ನೀಡಿದ್ದಾರೆ. ಅಲ್ಲದೇ ಮೃತ ಕೊರೊನಾ ಸೋಂಕಿತರ ಅಂತ್ಯಸಂಸ್ಕಾರಕ್ಕೆ ಎಧಿ ಫೌಂಡೇಷನ್ನಿಂದ ಸಹಾಯ ಮಾಡುತ್ತಿದ್ದಾರೆ.
ಪಾಕಿಸ್ತಾನದಲ್ಲಿ ಇಲ್ಲಿಯವರೆಗೆ 9,500 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, 197 ಜನರು ಸಾವಿಗೀಡಾಗಿದ್ದಾರೆ.