ಇಸ್ಲಾಮಾಬಾದ್ (ಪಾಕಿಸ್ತಾನ): ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಖುರ್ಚಿಗೆ ಕುತ್ತು ಬಂದಿದೆ. ತಮ್ಮದೇ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಸುಮಾರು 24 ಜನ ಸದಸ್ಯರು ತಿರುಗಿ ಬಿದ್ದಿದ್ದು, ಪ್ರತಿಪಕ್ಷಗಳು ಮಂಡಿಸಲು ಉದ್ದೇಶಿಸಿರುವ ಅವಿಶ್ವಾಸ ನಿರ್ಣಯವನ್ನು ಬೆಂಬಲಿಸಲು ಮುಂದಾಗಿದ್ದಾರೆ.
ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಪ್ರತಿಪಕ್ಷಗಳಾದ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅವಿಶ್ವಾಸ ನಿರ್ಣಯ ಮಂಡಿಸಲು ಉದ್ದೇಶಿಸಿದೆ. ಈ ಸಂಬಂಧ ಈಗಾಗಲೇ ಪ್ರತಿಪಕ್ಷಗಳ ಅಂದಾಜು 100 ಸದಸ್ಯರು ಮಾ.8ರಂದು ಮನವಿಯನ್ನೂ ಸಲ್ಲಿಸಿದ್ದಾರೆ. ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು ಹಾಗೂ ಹಣದುಬ್ಬರಕ್ಕೆ ಇಮ್ರಾನ್ ಖಾನ್ ಕಾರಣ ಎಂದು ಪ್ರತಿಪಕ್ಷಗಳು ದೂರಿವೆ.
ಹೀಗಾಗಿ ಇಮ್ರಾನ್ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಮಂಡಿಸಿರುವ ಅವಿಶ್ವಾಸ ನಿರ್ಣಯವು ಮಾ.28ರಂದು ಸಂಸತ್ತಿನ ಮುಂದೆ ಬರುವ ಸಾಧ್ಯತೆ ಇದೆ. ಈ ನಡುವೆ ಇಮ್ರಾನ್ ಖಾನ್ ಪಕ್ಷದ ಸದಸ್ಯರೇ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯ ಬೆಂಬಲಿಸಲು ತೀರ್ಮಾನಿಸಿದ್ದಾರೆ. ಈ ಬಗ್ಗೆ ಬಹಿರಂಗವಾಗಿಯೇ 24 ಸದಸ್ಯರು ಹೇಳಿಕೆ ನೀಡಿ, ಬೆದರಿಕೆ ಹಾಕಿದ್ದಾರೆ. ಆದ್ದರಿಂದ ಇಮ್ರಾನ್ ಖಾನ್ ಸರ್ಕಾರಕ್ಕೆ ಈಗ ಸಂಕಷ್ಟ ಎದುರಾಗಿದೆ. ಆಡಳಿತಾರೂಢ ಪಕ್ಷದ ಸದಸ್ಯರೇ ಇಮ್ರಾನ್ ಸರ್ಕಾರವನ್ನು ಕೆಡವುತ್ತಾರೋ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: ಬಾಂಗ್ಲಾದಲ್ಲಿ ಹೋಳಿ ಸಂದರ್ಭದಲ್ಲೇ ಇಸ್ಕಾನ್ ದೇಗುಲ ಧ್ವಂಸ : ಕಣ್ಮುಚ್ಚಿ ಕುಳಿತ ವಿಶ್ವಸಂಸ್ಥೆ ವಿರುದ್ಧ ಆಕ್ರೋಶ