ಇಸ್ಲಾಮಾಬಾದ್ (ಪಾಕಿಸ್ತಾನ): ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ ಕಾರ್ಯಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ "ಹೆಚ್ಚು ಕಾರ್ಯಪ್ರವೃತ್ತರಾಗಿದ್ದಾರೆ" ಮತ್ತು "ತಮ್ಮ ನಾಗರಿಕರಿಗೆ ಉತ್ತಮ ಸೇವೆಗಳನ್ನು ಒದಗಿಸುತ್ತಿದ್ದಾರೆ" ಎಂದು ಹೇಳಿದ್ದಾರೆ. ವಿದೇಶಿಗಳಲ್ಲಿರುವ ಪಾಕ್ ರಾಯಭಾರ ಕಚೇರಿ ಸಿಬ್ಬಂದಿಯ ಕೆಲಸದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿವಿಧ ರಾಷ್ಟ್ರಗಳ ರಾಜಧಾನಿಗಳಲ್ಲಿರುವ ತಮ್ಮ ರಾಯಭಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿದ ಖಾನ್, "ಅಸಡ್ಡೆ ಮತ್ತು ದಿನನಿತ್ಯದ ಸೇವೆಗಳಲ್ಲಿ ಅನಗತ್ಯ ವಿಳಂಬದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿರುವ ಪಾಕ್ ರಾಯಭಾರಿಗಳನ್ನು ದೂರಿದರು.
"ಸೌದಿ ಅರೇಬಿಯಾದಿಂದ ನನಗೆ ದೊರೆತಿರುವ ಮಾಹಿತಿ ಪ್ರಕಾರ, ನಮ್ಮ ರಾಯಭಾರ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕುವೈತ್‌ನ ಎನ್ಎಡಿಆರ್ಎ (ನ್ಯಾಷನಲ್ ಡೇಟಾಬೇಸ್ ಆ್ಯಂಡ್ ರಿಜಿಸ್ಟ್ರೇಷನ್ ಅಥಾರಿಟಿ) ಕಚೇರಿಯ ಸಿಬ್ಬಂದಿ ಜನರಿಗೆ ಮಾರ್ಗದರ್ಶನ ನೀಡುವ ಬದಲು ಲಂಚ ತೆಗೆದುಕೊಳ್ಳುತ್ತಾರೆ ಮತ್ತು ಅಧಿಕಾರಿಯೊಬ್ಬರು ಸುಳ್ಳು ದಾಖಲೆಗಳನ್ನು ಸಿದ್ದಪಡಿಸುವುದರಲ್ಲಿ ತೊಡಗಿಕೊಂಡಿದ್ದಾರೆ. ಇದೆಲ್ಲ ತಿಳಿದು ನಾನು ಆಘಾತಕ್ಕೊಳಗಾದೆ" ಎಂದು ಖಾನ್ ವರ್ಚುವಲ್ ಸಭೆಯಲ್ಲಿ ಹೇಳಿದ್ದಾರೆ.
ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ "ಹೆಚ್ಚು ಕಾರ್ಯಪ್ರವೃತ್ತರಾಗಿದ್ದಾರೆ" ಮತ್ತು "ತಮ್ಮ ನಾಗರಿಕರಿಗೆ ಉತ್ತಮ ಸೇವೆಗಳನ್ನು ಒದಗಿಸುತ್ತಿದ್ದಾರೆ" ಎಂದು ಇದೇ ವೇಳೆ ಇಮ್ರಾನ್ ಖಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದ ನಾಗರಿಕ ಪೋರ್ಟಲ್‌ನಲ್ಲಿ ನನಗೆ ಸಾಕಷ್ಟು ದೂರುಗಳು ಬಂದಿವೆ ಎಂದು ಖಾನ್ ಹೇಳಿದ್ದಾರೆ. ಸರ್ಕಾರ ವಿವಿಧ ಇಲಾಖೆಗಳ ವಿರುದ್ಧ ದೇಶ- ವಿದೇಶಗಳಲ್ಲಿರುವ ಪಾಕಿಸ್ತಾನಿಗಳು ನೇರ ದೂರು ನೀಡುವ ಸಲುವಾಗಿ ಇಮ್ರಾನ್ ಖಾನ್ ಸರ್ಕಾರ ಪಾಕಿಸ್ತಾನ್ ಸಿಟಿಜನ್ ಪೋರ್ಟಲ್ ಪ್ರಾರಂಭಿಸಿದೆ.