ಇಸ್ಲಾಮಾಬಾದ್ : ಚೀನಾ - ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಪ್ರಾಧಿಕಾರದ ಸುಗ್ರೀವಾಜ್ಞೆ ಕುರಿತಾದ ಪ್ರಶ್ನೆಗಳಿಗೆ ಪಾಕಿಸ್ತಾನ ಸರ್ಕಾರ ಅಸಮರ್ಪಕ ಪ್ರತಿಕ್ರಿಯೆ ನೀಡಿದ ಹಿನ್ನೆಲೆ ಪ್ರತಿಪಕ್ಷಗಳು ಶುಕ್ರವಾರ ನಡೆದ ಸೆನೆಟ್ ಅಧಿವೇಶನದಿಂದ ಹೊರ ಹೋದ ಪ್ರಸಂಗ ನಡೆದಿದೆ.
ಮಾಜಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಅಸಿಮ್ ಸಲೀಮ್ ಬಾಜ್ವಾ ಅವರು ಚೀನಾದ ರಾಯಭಾರಿಗಳನ್ನು ಭೇಟಿ ಮಾಡಿರುವ ಕುರಿತು ಅಧಿವೇಶನದಲ್ಲಿ ಚರ್ಚಿಸಲಾಯಿತು. ಈ ವೇಳೆ, ಅಸಿಮ್ ಸಲೀಮ್ ಇನ್ನೂ ಸಿಪಿಇಸಿ ಪ್ರಾಧಿಕಾರದ ಅಧ್ಯಕ್ಷರ ವೇತನವನ್ನು ಪಡೆಯುತ್ತಿದ್ದಾರೆಯೇ? ಎಂದು ಪಾಕಿಸ್ತಾನ ಮುಸ್ಲಿಂ ಲೀಗ್- ನವಾಜ್ (ಪಿಎಂಎಲ್-ಎನ್) ನ ಸೆನೆಟರ್ ಮೊಹಮ್ಮದ್ ಜಾವೇದ್ ಅಬ್ಬಾಸಿ ಅವರನ್ನು ಪ್ರತಿಪಕ್ಷಗಳು ಪ್ರಶ್ನಿಸಿದವು.
ಈ ವೇಳೆ ಮಾತನಾಡಿದ ಮುಷ್ತಾಕ್ ಅಹ್ಮದ್ ಅವರು, ಬಜ್ವಾ ಅವರು "ವಿವಾದಾತ್ಮಕ" ವ್ಯಕ್ತಿಯಾಗಿದ್ದು, ಅವರನ್ನು ಸಿಪಿಇಸಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಬಜ್ವಾ ವಿರುದ್ಧ ಭ್ರಷ್ಟಾಚಾರದ ಆರೋಪಗಳಿವೆ. ಹಾಗಾಗಿ ಇಂತಹ ವ್ಯಕ್ತಿಯನ್ನು ಸಿಪಿಇಸಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಬಾರದು ಎಂದು ಹೇಳಿದರು.
ಇನ್ನು ಅಧಿವೇಶನದ ವೇಳೆ ಅಸಾದ್ ಉಮರ್ ಅವರು ಸಿಪಿಇಸಿ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ನೀಡಿದ ಪ್ರತಿಕ್ರಿಯೆ ಅಸಮರ್ಪಕವಾಗಿದೆ ಎಂದು ಭಾವಿಸಿದ ಪ್ರತಿಪಕ್ಷದ ಸದಸ್ಯರು ಸೆನೆಟ್ನಿಂದ ಹೊರ ನಡೆದರು.
2019 ರಲ್ಲಿ ಪ್ರಧಾನಿ ಇಮ್ರಾನ್ ಖಾನ್ ಅವರು ಚೀನಾ ಭೇಟಿಗೆ ಮುಂಚಿತವಾಗಿ ಸಿಪಿಇಸಿ ಪ್ರಾಧಿಕಾರವನ್ನು ಸ್ಥಾಪಿಸುವ ಸುಗ್ರೀವಾಜ್ಞೆಯನ್ನು ಪ್ರಕಟಿಸಿದ್ದರು. ಮತ್ತು ಲೆಫ್ಟಿನೆಂಟ್ ಜನರಲ್ ಬಜ್ವಾ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದರು.