ಲಾಹೋರ್: 1986ರಲ್ಲಿ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದಾಗ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ 34 ವರ್ಷದ ಭೂ ಹಂಚಿಕೆ ಪ್ರಕರಣದಲ್ಲಿ ಮಾಜಿ ಪ್ರಧಾನಿ ನವಾಜ್ ಷರೀಫ್ ವಿರುದ್ಧ ಪಾಕಿಸ್ತಾನ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.
ಪ್ರಕರಣ ಸಂಬಂಧ ಷರೀಪ್ ಅವರ ಎಲ್ಲ ವಿಳಾಸಗಳಿಗೂ ಸಮನ್ಸ್ ಪ್ರತಿ ನೀಡಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಾಲಯ ಪೊಲೀಸರಿಗೆ ತಿಳಿಸಿದೆ. ಇನ್ನೂ ಈ ಪ್ರಕರಣದಲ್ಲಿ ಜಂಗ್/ಜಿಯೋ ಮಾಧ್ಯಮ ಸಮೂಹದ ಮಾಲಿಕ ಮಿರ್ ಶಕೀಲೂರ್ ರೆಹಮಾನ್ ಸಹ ಭಾಗಿ ಆರೋಪ ಎದುರಿಸುತ್ತಿದ್ದು, ಆತನನ್ನು ಬಂಧಿಸಲಾಗಿದೆ.
ಕೋರ್ಟ್ ವಿಚಾರಣೆಯ ಸಮಯದಲ್ಲಿ ಸಮನ್ಸ್ ಕುರಿತಂತೆ ಮಾಹಿತಿ ನೀಡಿದ ಪೊಲೀಸರು. ಷರೀಫ್ ನಿವಾಸಗಳಾದ ಮಾಡೆಲ್ ಟೌನ್ ಹಾಗೂ ಉಮ್ರಾಗಳಲ್ಲಿ ಅವರ ಅನುಪಸ್ಥಿತಿಯ ಕಾರಣ ಸಮನ್ಸ್ ನೀಡಲು ಸಾಧ್ಯವಾಗಿಲ್ಲ ಎಂದಿದ್ದಾರೆ. ಈ ವೇಳೆ, ನ್ಯಾಯಮೂರ್ತಿ ಅಸದ್ ಅಲಿ, ಇಲ್ಲಿನ ಹಾಗೂ ವಿದೇಶದಲ್ಲಿರುವ ನಿವಾಸಗಳಿಗೆ ಸಮನ್ಸ್ ನೀಡುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
ಇದೇ ವೇಳೆ, ಮಾರ್ಚ್ನಲ್ಲಿ ಬಂಧನವಾಗಿರುವ ಶಕೀಲೂರ್ ರೆಹಮಾನ್ ಬಂಧನದ ಅವಧಿಯನ್ನು ಸೆಪ್ಟೆಂಬರ್ 3ರ ವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಇನ್ನು ಕೋಟ್ ಲಖ್‌ಪತ್ ಜೈಲಿನಲ್ಲಿ 7 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಅಲ್ - ಅಜೀಜಿಯಾ ಮಿಲ್ಸ್ ಭ್ರಷ್ಟಾಚಾರ ಪ್ರಕರಣದಲ್ಲಿ ಷರೀಫ್‌ಗೆ ಜಾಮೀನು ನೀಡಲಾಗಿದೆ. ಇದಲ್ಲದೇ ಲಂಡನ್ನಲ್ಲಿ ಅನಾರೋಗ್ಯ ಹಿನ್ನೆಲೆ ಚಿಕಿತ್ಸೆ ಪಡೆಯಲು 4 ವಾರಗಳ ಅನುಮತಿ ಕೋರಿ ತೆರಳಿದ್ದರು.
ನವಾಜ್ ಷರೀಫ್ ಅವರ ವೈದ್ಯಕೀಯ ವರದಿಯನ್ನು ಲಂಡನ್‌ನಲ್ಲಿರುವ ವೈದ್ಯರಿಂದ ಪ್ರಸ್ತುತಪಡಿಸದೇ ಜಾಮೀನು ಅವಶ್ಯಕತೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸರ್ಕಾರವು ಪರಾರಿಯಾಗಿದ್ದಾನೆ ಎಂದು ಈ ಹಿಂದೆ ಘೋಷಣೆ ಮಾಡಿತ್ತು.