ಇಸ್ಲಾಮಾಬಾದ್: ಮರಣದಂಡನೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ಅವರನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸಲು ವಕೀಲರನ್ನು ನೇಮಕ ಮಾಡುವ ನ್ಯಾಯಾಂಗ ಆದೇಶವನ್ನು ಭಾರತಕ್ಕೆ ತಿಳಿಸಲಾಗಿದೆ ಎಂದು ಪಾಕಿಸ್ತಾನ ಹೇಳಿದೆ. ಆದರೆ ಭಾರತ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ)ದ ತೀರ್ಪನ್ನು ಅನುಷ್ಠಾನಗೊಳಿಸಲು ಪಾಕಿಸ್ತಾನ ಬದ್ಧವಾಗಿದೆ ಮತ್ತು ತೀರ್ಪನ್ನು ಜಾರಿಗೆ ತರಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ವಿದೇಶಾಂಗ ಕಚೇರಿ ವಕ್ತಾರ ಜಾಹಿದ್ ಹಫೀಜ್ ಚೌಧರಿ ತಿಳಿಸಿದ್ದಾರೆ.
"ನಾವು ಇಸ್ಲಾಮಾಬಾದ್ ಹೈಕೋರ್ಟ್ (ಐಎಚ್‌ಸಿ) ತೀರ್ಪನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಭಾರತಕ್ಕೆ ತಲುಪಿಸಿದ್ದೇವೆ. ನಮಗೆ ಇನ್ನೂ ಭಾರತದ ಕಡೆಯಿಂದ ಪ್ರತಿಕ್ರಿಯೆ ಬಂದಿಲ್ಲ" ಎಂದು ಹೇಳಿದ್ದಾರೆ
50 ವರ್ಷದ ನಿವೃತ್ತ ಭಾರತೀಯ ನೌಕಾಪಡೆಯ ಅಧಿಕಾರಿ ಜಾಧವ್ ಅವರಿಗೆ 2017ರ ಏಪ್ರಿಲ್‌ನಲ್ಲಿ ಗೂಢಚರ್ಯೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು.
ಸೆಪ್ಟೆಂಬರ್ 3ರಂದು ಇಸ್ಲಾಮಾಬಾದ್ ಹೈಕೋರ್ಟ್ ವಕೀಲರನ್ನು ನೇಮಿಸಲು ಭಾರತ ಮತ್ತು ಜಾಧವ್ ಅವರನ್ನು ಮತ್ತೊಮ್ಮೆ ಸಂಪರ್ಕಿಸುವಂತೆ ಅಧಿಕಾರಿಗಳನ್ನು ಕೇಳಿತ್ತು.
ಈ ಪ್ರಕರಣದಲ್ಲಿ ವಿದೇಶಿ ವಕೀಲರನ್ನು ನೇಮಿಸುವ ಬೇಡಿಕೆಯನ್ನು ಅಂಗೀಕರಿಸುವ ಬಗ್ಗೆ ಭಾರತದಿಂದ ಪಾಕಿಸ್ತಾನದ ಮೇಲೆ ಯಾವುದೇ ಒತ್ತಡವಿಲ್ಲ ಎಂದು ಚೌಧರಿ ಹೇಳಿದ್ದಾರೆ.