ಇಸ್ಲಾಮಾಬಾದ್: ದೆಹಲಿಯ ಪ್ರತಿಷ್ಠಿತ ಜವಹರ್ಲಾಲ್ ನೆಹರೂ ವಿಶ್ವವಿದ್ಯಾನಿಲಯಕ್ಕೆ (ಜೆಎನ್ಯು) ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಭೇಟಿ ನೀಡಿದ್ದು ಭಾರೀ ವಿವಾದ ಸೃಷ್ಟಿಯಾದ ಬೆನ್ನಲ್ಲೇ ಮತ್ತೊಂದು ಸುತ್ತಿನ ಸುದ್ದಿಯಾಗಿದೆ.
ಜೆಎನ್ಯು ಕ್ಯಾಂಪಸ್ಗೆ ನುಗ್ಗಿದ ಹಿಂದೂ ರಕ್ಷಾ ದಳ ಕಾರ್ಯಕರ್ತರು ವಿದ್ಯಾರ್ಥಿ ವಸತಿ ನಿಲಯದಲ್ಲಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ರಾಷ್ಟ್ರದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿತ್ತು. ವಿವಿಯಲ್ಲಿ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ದೀಪಿಕಾ ಅವರು ಭೇಟಿ ನೀಡಿ ಧರಣಿ ನಿರತರಿಗೆ ಬೆಂಬಲ ಸೂಚಿಸಿದ್ದರು.
ಆಕೆಯ ನಡೆಯನ್ನು ಮೆಚ್ಚಿದ ಪಾಕಿಸ್ತಾನದ ಸೇನಾ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಬಳಿಕ ಅದನ್ನು ತಮ್ಮ ಖಾತೆಯಿಂದ ಅಳಿಸಿಹಾಕಿದ್ದಾರೆ.
'ದೀಪಿಕಾ ಪಡುಕೋಣೆ ಯುವಕರು ಮತ್ತು ಸತ್ಯದ ಪರವಾಗಿ ನಿಂತಿದ್ದಾರೆ. ಕಠಿಣ ಪರಿಸ್ಥಿತಿಯಲ್ಲಿ ನಿಂತ ಧೈರ್ಯಶಾಲಿ ವ್ಯಕ್ತಿತ್ವ ಅವರದ್ದು. ಎಲ್ಲಕ್ಕಿಂತ ಮಾನವೀಯತೆ ದೊಡ್ಡದು' ಎಂದು ಟ್ವೀಟ್ ಮಾಡಿದ್ದರು. ಆದರೆ, ಕೆಲ ನಿಮಿಷದ ಬಳಿಕ ಇದನ್ನು ಅಳಿಸಿ ಹಾಕಿದ್ದಾರೆ. ಇದಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.