ಮಾಸ್ಕೋ (ರಷ್ಯಾ): ಜೈಲಿನಲ್ಲಿರುವ ಪ್ರತಿಪಕ್ಷದ ನಾಯಕ ಅಲೆಕ್ಸಿ ನವಲ್ನಿ ಅವರನ್ನು ಶೀಘ್ರ ಬಿಡುಗಡೆ ಮಾಡುವಂತೆ ಒತ್ತಾಯಿಸಿ, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ರಷ್ಯಾದಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ 5 ಸಾವಿರಕ್ಕೂ ಅಧಿಕ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ.
ಕಳೆದ ವಾರದಿಂದ ದೇಶಾದ್ಯಂತ ಅತಿದೊಡ್ಡ ಪ್ರತಿಭಟನೆ ಪ್ರಾರಂಭವಾಗಿದೆ. ಈ ಪ್ರತಿಭಟನೆಯನ್ನು ಹತ್ತಿಕ್ಕಲು ರಷ್ಯಾದ ಅಧಿಕಾರಿಗಳು ಪ್ರಯತ್ನಿಸುತ್ತಿದ್ದು, ಜನರು ವ್ಯಾಪಕ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ದೇಶದ ಬಹುತೇಕ ನಗರಗಳನ್ನು ಪ್ರತಿಭಟನಾಕಾರರು ಆವರಿಸಿದ್ದಾರೆ.
ನವಲ್ನಿ ಅವರ ತಂಡವು ಮಾಸ್ಕೋದಲ್ಲಿ ದೊಡ್ಡ ಮಟ್ಟದಲ್ಲಿ ಮತ್ತೊಂದು ಪ್ರತಿಭಟನೆಯನ್ನು ಶೀಘ್ರದಲ್ಲೆ ಆಯೋಜಿಸಲು ನಿರ್ಧರಿಸಿದೆ. ನ್ಯಾಯಾಲಯದ ವಿಚಾರಣೆಯ ಬಳಿಕ ಅವರಿಗೆ ಕೆಲ ವರ್ಷಗಳ ಜೈಲು ಶಿಕ್ಷೆಯಾಗುವ ಸಾಧ್ಯತೆಯೂ ಕಂಡುಬಂದಿದೆ.
ಅಲೆಕ್ಸಿ ನವಲ್ನಿ ಅವರು ಬರ್ಲಿನ್‌ನಿಂದ ಮಾಸ್ಕೋಗೆ ಹಿಂದಿರುಗಿದ ಸ್ವಲ್ಪ ಸಮಯದ ನಂತರ ಅವರನ್ನು ಬಂಧಿಸಲಾಯಿತು. ಹಣ ವರ್ಗಾವಣೆಗೆ ಸಂಬಂಧಿಸಿದಂತೆ ನವಲ್ನಿ ನಿಯಮಗಳನ್ನು ಉಲ್ಲಂಘಿಸಿ, ನ್ಯಾಯಸಮ್ಮತವಲ್ಲದ ಕಾರ್ಯ ನಿರ್ವಹಿಸಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.