ಬೀಜಿಂಗ್: ಚೀನಾದ ಬೀಜಿಂಗ್ನಲ್ಲಿ ವಾರದ ಹಿಂದೆ ಗಣಿ ಸ್ಫೋಟ ದುರಂತ ಸಂಭವಿಸಿದ್ದು, ಗಣಿಯಲ್ಲಿ ಸಿಕ್ಕಿಬಿದ್ದಿದ್ದ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸ್ಫೋಟಕ್ಕೆ ಸಿಲುಕಿದ್ದ 22 ಜನರ ಪೈಕಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, 11 ಮಂದಿ ಸುರಕ್ಷಿತವಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಉಳಿದ 10 ಜನರು ಬದುಕಿರುವ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಗಣಿಯ ಒಂದು ಕಡೆಯಲ್ಲಿ ಸಿಕ್ಕಿಬಿದ್ದ 11 ಜನ ಕಾರ್ಮಿಕರೊಂದಿಗೆ ಅಧಿಕಾರಿಗಳು, ರಕ್ಷಕರು ನಿರಂತರ ಸಂಪರ್ಕದಲ್ಲಿದ್ದು, ಅವರಿಗೆ ಆಹಾರ, ಔಷಧಿ ಮತ್ತು ಇತರೆ ಅಗತ್ಯ ಸಾಮಗ್ರಿಗಳನ್ನು ಒದಗಿಸುತ್ತಿದ್ದಾರೆ.
ಪೂರ್ವ ಶಾಂಡೊಂಗ್ ಪ್ರಾಂತ್ಯದಲ್ಲಿರುವ ಶಿಚೆಂಗ್ ಪಟ್ಟಣ ಸಮೀಪದ ಗಣಿಯಲ್ಲಿ ಜನವರಿ 10 ರಂದು ಈ ದುರಂತ ಸಂಭವಿಸಿತ್ತು. ಆದರೆ ಒಂದು ದಿನ ಕಳೆದರೂ ಕಾರ್ಯಾಚರಣೆ ಕೈಗೊಳ್ಳಲು ಹಿಂದೇಟು ಹಾಕಿದ ಕಾರಣ ಅಲ್ಲಿನ ವ್ಯವಸ್ಥಾಪಕರನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಕಾರ್ಮಿಕರಿಗೆ ಯಾವುದೇ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.