ಟೋಕಿಯೋ(ಜಪಾನ್): ಜುಲೈ 23ರಿಂದ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ನಲ್ಲಿ ಗೆದ್ದವರಿಗೆ ಪದಕ ವಿತರಣೆ ವೇಳೆ ಸ್ಪರ್ಧಿಗಳು, ಮೆಡಲ್ ನೀಡುವವರು, ಸ್ವಯಂಸೇವಕರು ಮತ್ತು ಇತರರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಕೋವಿಡ್ ಹಿನ್ನೆಲೆಯಲ್ಲಿ ಈ ಮಾರ್ಗಸೂಚಿಗಳ ಬಿಡುಗಡೆ ಮಾಡಲಾಗಿದ್ದು, ಯಾರೂ ಕೂಡಾ ಪದಕ ವಿತರಣೆ ವೇಳೆ ಗುಂಪು ಗುಂಪಾಗಿ ಫೋಟೋ ತೆಗೆಸಿಕೊಳ್ಳಬಾರದು, ಪೋಡಿಯಂನ ಬಳಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕೆಂದು ಸೂಚನೆ ನೀಡಿದೆ.
ಈ ಮೊದಲೇ ಜೂನ್ನಲ್ಲಿ ಮಾರ್ಗಸೂಚಿ ಬಿಡುಗಡೆಯಾಗಿದ್ದು, ಸ್ಪರ್ಧಿಗಳು ಮತ್ತು ಮೆಡಲ್ ನೀಡುವವರು ಮಾಸ್ಕ್ಗಳನ್ನು ಧರಿಸುವುದು ಕಡ್ಡಾಯ ಎಂದು ಹೇಳಿತ್ತು. ಈಗ ಅದೇ ನಿಯಮವನ್ನು ಮತ್ತೊಮ್ಮೆ ಕೋವಿಡ್ ಮಾರ್ಗಸೂಚಿಯಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಸೂಚಿಸಿದೆ.
ಇದರ ಜೊತೆಗೆ ಚಿನ್ನ, ಬೆಳ್ಳಿ, ಕಂಚಿನ ಪದಕ ಗಳಿಸುವ ಸ್ಪರ್ಧಿಗಳ ಪದಕ ಸ್ವೀಕರಿಸುವ ಪೋಡಿಯಂಗಳನ್ನು ಕೂಡಾ ಸಾಕಷ್ಟು ದೂರದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಇಡಲಾಗುತ್ತದೆ ಎಂದು ಐಒಸಿ ತಿಳಿಸಿದೆ.
ಎಲ್ಲರೂ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಸೂಚನೆ ನೀಡಲಾಗಿದ್ದು, ಪದಕ ವಿತರಣೆ ವೇಳೆ ಹಾಜರಿರುವ ಓರ್ವ ಐಒಸಿ ಸದಸ್ಯ ಮತ್ತು ಇಂಟರ್ನ್ಯಾಷನಲ್ ಫೆಡರೇಷನ್ನ ಓರ್ವ ಪ್ರತಿನಿಧಿ ಮಾತ್ರ ಸ್ಥಳದಲ್ಲಿ ಇರುತ್ತಾರೆ.
ಟೋಕಿಯೊ-2020ರಲ್ಲಿ ಎಲ್ಲರ ಆರೋಗ್ಯದ ದೃಷ್ಟಿಯಿಂದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಇಲ್ಲಿ ಭಾಗವಹಿಸುವ ಎಲ್ಲರೂ ಕೂಡಾ ಆರೋಗ್ಯದ ಜೊತೆಗೆ ಒಲಿಂಪಿಕ್ ವಿಶೇಷತೆಯನ್ನು ಕಾಪಾಡಿಕೊಳ್ಳಬೇಕು ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಮನವಿ ಮಾಡಿದೆ.
ಇದನ್ನೂ ಓದಿ: ಕಷ್ಟದ ದಿನಗಳನ್ನು ತಂದವರು ಯಾರು ಎಂದು ದೇಶಕ್ಕೆ ಗೊತ್ತು: ರಾಹುಲ್ ಗಾಂಧಿ
ಬುಧವಾರ ಈ ಬಗ್ಗೆ ಮಾತನಾಡಿದ್ದ ಅಂತಾರಾಷ್ಟ್ರೀಯ ಒಲಿಂಪಿಕ್ ಕಮಿಟಿಯ ಅಧ್ಯಕ್ಷ ಥಾಮಸ್ ಬಾಕ್ ಈ ಬಾರಿ ಮೆಡಲ್ ಗೆದ್ದವರು ಸ್ವತಃ ತಾವೇ ತಮ್ಮ ಕೊರಳಿಗೆ ಮೆಡಲ್ ಹಾಕಿಕೊಳ್ಳುತ್ತಾರೆ. ಕೋವಿಡ್ ಹರಡದಿರಲಿ ಎಂಬ ಉದ್ದೇಶದಿಂದ ನಿಯಮ ಜಾರಿಗೊಳಿಸಲಾಗಿದೆ ಎಂದಿದ್ದರು.