ಸಿಯೋಲ್: ಉತ್ತರ ಕೊರಿಯಾ ರೈಲಿನ ಮೇಲಿಂದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಯಶಸ್ವಿಯಾಗಿ ಉಡಾಯಿಸಿದೆ. ಬೈಡನ್ ಆಡಳಿತ (ಅಮೆರಿಕ) ವಿಧಿಸಿದ ಹೊಸ ನಿರ್ಬಂಧಗಳ ವಿರುದ್ಧ ಸೆಟೆದು ನಿಂತಿರುವ ಕಿಮ್ ಸತತವಾಗಿ ಬಾಲಿಸ್ಟಿಕ್ ಕ್ಷಿಪಣಿಗಳ ಪರೀಕ್ಷಾರ್ಥ ಪ್ರಯೋಗಗಳನ್ನು ಮುಂದುವರೆಸಿದ್ದಾರೆ.
ಉತ್ತರ ಕೊರಿಯಾದ ಹಿಂದಿನ ಪರೀಕ್ಷೆಗಳ ಮೇಲೆ ಹೊಸ ನಿರ್ಬಂಧಗಳನ್ನು ಹೇರಿದ್ದಕ್ಕಾಗಿ ಪಯೋಂಗ್ಯಾಂಗ್‌ನ ವಿದೇಶಾಂಗ ಸಚಿವಾಲಯ ಅಮೆರಿಕದ ವಿರುದ್ಧ ಹರಿಹಾಯ್ದಿತ್ತು. ಅಮೆರಿಕದ ಕ್ರಮ ಖಂಡಿಸುವ ಹೇಳಿಕೆ ನೀಡಿದ ಮರು ದಿನವೇ ಕೊರಿಯಾ ರೈಲಿನಿಂದಲೇ ಬಾಲಿಸ್ಟಿಕ್ ಕ್ಷಿಪಣಿ ಉಡ್ಡಯನ ಮಾಡಿ ಪರೀಕ್ಷೆ ನಡೆಸಿದೆ.
ಇತ್ತೀಚಿನ ತಿಂಗಳುಗಳಲ್ಲಿ ಉತ್ತರ ಕೊರಿಯಾವು ಸಾಂಕ್ರಾಮಿಕ - ಸಂಬಂಧಿತ ಗಡಿ ಮುಚ್ಚುವಿಕೆ ಮತ್ತು ಅಮೆರಿಕದೊಂದಿಗಿನ ಪರಮಾಣು ರಾಜತಾಂತ್ರಿಕತೆಯ ಸ್ಥಗಿತದ ಮಧ್ಯೆ ಈ ಪ್ರದೇಶದಲ್ಲಿ ವಿರೋಧಿಗಳ ಕ್ಷಿಪಣಿ ದಾಳಿಯನ್ನು ಹತ್ತಿಕ್ಕಲು ಕ್ಷಿಪಣಿ ಪ್ರತಿ ರಕ್ಷಣಾ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲು ಕೊರಿಯಾ ಮುಂದಾಗಿದ್ದು, ಬಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆಗಳನ್ನು ಹೆಚ್ಚಿಸುತ್ತಿದೆ.
ಉತ್ತರ ಕೊರಿಯಾ ನೆರೆಹೊರೆಯವರಿಗೆ ಬೆದರಿಕೆ ಹಾಕುವ ಹಾಗೂ ಒತ್ತಡ ತಂತ್ರ ಅನುಸರಿಸುವ ಕ್ರಮವಾಗಿ ಇಂತಹ ಪರೀಕ್ಷೆಗೆ ಮುಂದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ?