ಕರಾಚಿ: ಗ್ವಾದರ್ ಬಂದರಿನಲ್ಲಿ ಕಾರ್ಯತಂತ್ರಗಳನ್ನು ರೂಪಿಸಲು ಚೀನಾಗೆ ಪಾಕಿಸ್ತಾನ ಯಾವುದೇ ಸೇನಾ ನೆಲೆಗಳನ್ನು ನೀಡಿಲ್ಲ ಎಂದು ಪಾಕ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು, 60 ಶತಕೋಟಿ ಡಾಲರ್ ಮೊತ್ತದ ಚೀನಾ - ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯಲ್ಲಿ ಯಾವುದೇ ದೇಶ ಹೂಡಿಕೆ ಮಾಡಬಹುದು. ನಾವು ಯಾರಿಗೂ ಆಪ್ತರಲ್ಲ ಎಂದು ಹೇಳುವ ಮೂಲಕ ಚೀನಾಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಅರಬ್ಬಿ ಸಮುದ್ರಕ್ಕೆ ಹೊಂದಿಕೊಂಡಿರುವ ಗ್ವಾದರ್ ಬಂದರನ್ನು ಸಿಪಿಇಸಿ ಯೋಜನೆಯ ಕಿರೀಟದಲ್ಲಿರುವ ರತ್ನ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಪ್ರಕ್ಷುಬ್ಧವಾಗಿರುವ ಬಲೂಚಿಸ್ತಾನ್ ಪ್ರಾಂತ್ಯದ ಭದ್ರತೆಯೂ ಪ್ರಮುಖವಾಗಿದೆ. ಪಾಕಿಸ್ತಾನದಲ್ಲಿ ಚೀನಾದ ಆರ್ಥಿಕ ನೆಲೆಗಳಿದ್ದು, ಪ್ರಪಂಚದ ಯಾವುದೇ ದೇಶ ಇಲ್ಲಿ ಹೂಡಿಕೆ ಮಾಡಬಹುದು. ಹೀಗಾಗಿ ಅಮೆರಿಕ, ರಷ್ಯಾ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳಿಗೂ ಇಲ್ಲಿ ಅವಕಾಶಗಳು ಮುಕ್ತವಾಗಿವೆ ಎಂದು ಯೂಸುಫ್ ಹೇಳಿದ್ದಾರೆ.
ಅನಗತ್ಯ ಚೆಕ್‌ಪೋಸ್ಟ್‌ಗಳು, ನೀರು, ವಿದ್ಯುತ್‌ನ ತೀವ್ರ ಕೊರತೆ ಹಾಗೂ ಅಕ್ರಮ ಮೀನುಗಾರಿಕೆ ಮಾಡುವವರಿಂದ ಗ್ವಾದರ್ ಬಳಿಯ ಜನರಿಗೆ ಬೆದರಿಕೆಗಳು ಬರುತ್ತಿವೆ. ಇದರ ವಿರುದ್ಧ ಕಳೆದ ತಿಂಗಳು ಗ್ವಾದರ್‌ನಲ್ಲಿ ಬೃಹತ್ ಪ್ರತಿಭಟನೆಯೂ ನಡೆದಿತ್ತು. ಚೀನಾ - ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಗಾಗಿ ಗ್ವಾದರ್‌ನಲ್ಲಿ ಚೀನಾದ ಉಪಸ್ಥಿತಿ ವಿರುದ್ಧವೇ ಈ ಪ್ರತಿಭಟನೆ ನಡೆದಿದೆ ಎನ್ನಲಾಗಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೂಲಕ ಚೀನಾ - ಪಾಕಿಸ್ತಾನ ಆರ್ಥಿಕ ಕಾರಿಡಾರ್‌ಗೆ ಭಾರತ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದೆ. ಬೃಹತ್ ಮೂಲ ಸೌಕರ್ಯ ಯೋಜನೆಯು ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತ್ಯವನ್ನು ಪಾಕಿಸ್ತಾನದ ಗ್ವಾದರ್ ಬಂದರಿನೊಂದಿಗೆ ಸಂಪರ್ಕಿಸುತ್ತದೆ.
ಇದನ್ನೂ ಓದಿ: ಮಾಲಿಯಲ್ಲಿ ಭಯೋತ್ಪಾದಕರ ದಾಳಿ: ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯ 7 ಯೋಧರ ಹತ್ಯೆ