ಕಠ್ಮಂಡು : ಭಾರತದ ಕೆಲ ರಾಜ್ಯಗಳಲ್ಲಿ ಹಕ್ಕಿ ಜ್ವರ ಕಂಡು ಬರುತ್ತಿರುವ ಹಿನ್ನೆಲೆ ಎಲ್ಲಾ ರೀತಿಯ ಕುಕ್ಕುಟೋತ್ಪನ್ನಗಳ ಆಮದನ್ನು ನೇಪಾಳ ಸ್ಥಗಿತಗೊಳಿಸಿದೆ.
ಭಾರತದಿಂದ ಬರುವ ಕುಕ್ಕುಟೋತ್ಪನ್ನಗಳೇ ನೇಪಾಳದ ಶತಕೋಟಿ ಕೋಳಿ ಉದ್ಯಮಕ್ಕೆ ಪ್ರಾಥಮಿಕ ಮಾರುಕಟ್ಟೆಯಾಗಿದ್ದು, ಆಮದು ನಿಲ್ಲಿಸಿ ಎಂದು ನೇಪಾಳದ ಕೃಷಿ ಮತ್ತು ಜಾನುವಾರು ಅಭಿವೃದ್ಧಿ ಸಚಿವಾಲಯ ತನ್ನ ಎಲ್ಲಾ ಕಚೇರಿಗಳಿಗೆ ನಿರ್ದೇಶನ ನೀಡಿದೆ.
ಇದನ್ನೂ ಓದಿ: ಯಾವ್ಯಾವ ರಾಜ್ಯಗಳಲ್ಲಿ ಹೇಗಿದೆ ಹಕ್ಕಿ ಜ್ವರದ ಪರಿಸ್ಥಿತಿ: ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ಅಲ್ಲದೇ ನೇಪಾಳ-ಭಾರತ ಗಡಿ ಸಮೀಪವಿರುವ ಪೌಲ್ಟ್ರಿ ಉತ್ಪನ್ನಗಳ ಮುಕ್ತ ವ್ಯಾಪಾರ ನಿಲ್ಲಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದೆ. ಭಾರತದಿಂದ ಪ್ರಮಾಣೀಕೃತ ಕುಕ್ಕುಟೋತ್ಪನ್ನಗಳನ್ನು ಮಾತ್ರ ಆಮದು ಮಾಡಿಕೊಳ್ಳಲು ಅನುಮತಿ ಇದೆ ಎಂದು ನೇಪಾಳ ಕೃಷಿ ಸಚಿವಾಲಯದ ವಕ್ತಾರ ಶ್ರೀರಾಮ್ ಘಿಮಿರೆ ಸ್ಪಷ್ಟಪಡಿಸಿದ್ದಾರೆ.
ಕಳೆದೊಂದು ವಾರದಿಂದ ಮಧ್ಯಪ್ರದೇಶ, ಹಿಮಾಚಲಪ್ರದೇಶ, ರಾಜಸ್ಥಾನ, ಕೇರಳ, ಗುಜರಾತ್, ಹರಿಯಾಣ ಮತ್ತು ಬಿಹಾರ ಸೇರಿ ಅನೇಕ ರಾಜ್ಯಗಳಲ್ಲಿ ಹಕ್ಕಿಜ್ವರ ವರದಿಯಾಗಿದೆ. ಕೋಳಿ, ಬಾತುಕೋಳಿ, ಕಾಗೆ, ಪಾರಿವಾಳ ಸೇರಿ ಸಾವಿರಾರು ಪಕ್ಷಿಗಳ ಮಾರಣಹೋಮವಾಗಿದೆ.