ಸಿಯೋಲ್ : ಉತ್ತರ ಕೊರಿಯಾದ ಸುಪ್ರೀಂ ಲೀಡರ್ ಕಿಮ್ ಜಾಂಗ್ ಉನ್ ಆರೋಗ್ಯದ ಬಗ್ಗೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಅದು ಯುಎಸ್ ರಾಜಧಾನಿಯಿಂದ ಹಿಡಿದು ವಿಶ್ವದ ವಿವಿಧ ರಾಷ್ಟ್ರಗಳಲ್ಲೂ ಚರ್ಚೆಯಾಗುತ್ತದೆ. ಜೊತೆಗೆ ಕಿಮ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಕೆಲ ಸಮಯ ಮಾಯವಾಗಿ ಬಳಿಕ ಮತ್ತೆ ಪ್ರತ್ಯಕ್ಷವಾಗುವುದು ಸಾಮಾನ್ಯ ಎನ್ನುವಂತಾಗಿದೆ. ಆದರೆ, ಪ್ರತಿ ಬಾರಿ ಪ್ರತ್ಯಕ್ಷವಾದಾಗಲೂ ಕಿಮ್ ಹೊಸತೇನಾದರೊಂದು ವಿಚಾರದಲ್ಲಿ ಸುದ್ದಿಯಾಗುತ್ತಾರೆ.
ಸಣ್ಣಗಾಗಿರುವ ಕಿಮ್!
ಕಳೆದ ವರ್ಷದಿಂದ ಕಿಮ್ ಕೊರೊನಾ ಸೋಂಕಿನ ವಿಚಾರವಾಗಿ ಸುದ್ದಿಯಾಗಿದ್ದರು. ಉ.ಕೊರಿಯಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯ ಕುರಿತು ಸುದ್ದಿಯಾಗಿತ್ತು, ಇದಕ್ಕೂ ಮೊದಲು ಖಂಡಾಂತರ ಕ್ಷಿಪಣಿ ಪ್ರಯೋಗಿಸಿ ಮತ್ತೆ ಸುದ್ದಿಯಲ್ಲಿದ್ದರು. ಆದರೆ, ಈಗ ಅವರ ಆರೋಗ್ಯದ ವಿಚಾರವಾಗಿ ಸುದ್ದಿಯಾಗಿದ್ದಾರೆ. ಇತ್ತೀಚಿಗೆ ಮಾಧ್ಯಮದಲ್ಲಿ ಪ್ರಸಾರವಾದ ಚಿತ್ರದಲ್ಲಿ ಕಿಮ್ ಸಣ್ಣಗಾಗಿರುವುದು ಕಂಡು ಬಂದಿದೆ. ಹೀಗಾಗಿ ಕಿಮ್ ಅನಾರೋಗ್ಯಕ್ಕೆ ತುತ್ತಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗ್ತಿದೆ.
ಉ.ಕೊರಿಯಾದ ಸರ್ವಾಧಿಕಾರಿಗೆ ಅನಾರೋಗ್ಯವೇ?
5.8 ಅಡಿ ಎತ್ತರ ಹಾಗೂ 140 ಕೆಜಿ ತೂಕವಿರುವ ಕಿಮ್ ಈಗ ಸುಮಾರು 20 ಕೆ.ಜಿಯಷ್ಟು ಇಳಿದಿರಬಹುದು ಎನ್ನಲಾಗುತ್ತಿದೆ. ಅಲ್ಲದೇ ಮುಖದ ಭಾಗದಲ್ಲಿಯೂ ತೆಳ್ಳಗಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಹೃದಯ ಸಂಬಂಧಿ ಕಾಯಿಲೆ ಹೊಂದಿರುವ ಕುಟುಂಬದದಿಂದ ಬಂದಿರುವ ಅವರು, ಮದ್ಯಪಾನ ಹಾಗೂ ಧೂಮಪಾನಕ್ಕೆ ದಾಸರಾಗಿದ್ದಾರೆ. ಈ ಹಿಂದೆ ಅವರ ತಂದೆ ಹಾಗೂ ಅಜ್ಜ ಹೃದಯಾಘಾತದಿಂದಲೇ ಮೃತಪಟ್ಟಿದ್ದರು. ಆದರೆ ಕಿಮ್ ಅನಾರೋಗ್ಯದ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಯೂನಿಫಿಕೇಷನ್ ಸಚಿವಾಲಯ ಮಾಹಿತಿ ನೀಡಿದೆ.