ಯಾಂಗೊನ್ (ಮ್ಯಾನ್ಮಾರ್) : ಮಿಲಿಟರಿ ಆಡಳಿತದ ವಿರುದ್ಧ ದನಿ ಎತ್ತಿದ್ದಕ್ಕಾಗಿ ದೇಶದ್ರೋಹ ಆರೋಪ ಎದುರಿಸುತ್ತಿದ್ದ ಮ್ಯಾನ್ಮಾರ್‌ನ ನಾಯಕಿ, ನೋಬೆಲ್ ಪ್ರಶಸ್ತಿ ಪುರಸ್ಕೃತೆ ಆಂಗ್ ಸಾನ್ ಸೂಕಿ ಅವರಿಗೆ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.
ಕಳೆದ ಫೆಬ್ರವರಿಯಲ್ಲಿ ಮ್ಯಾನ್ಮಾರ್ನಲ್ಲಿ ಮಿಲಿಟರಿ ದಂಗೆಯೆದ್ದು ನಾಗರಿಕ ಸರ್ಕಾರವನ್ನು ಉರುಳಿಸಲಾಗಿತ್ತು. ಅಂದಿನ ಆಡಳಿತಾರೂಢ ಪಕ್ಷದ ಕೌನ್ಸಿಲರ್ ಆಂಗ್ ಸಾನ್ ಸೂಕಿ ಸೇರಿದಂತೆ ಹಲವು ನಾಯಕರನ್ನು ಅಲ್ಲಿನ ಸೇನೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು ಗೃಹಬಂಧನದಲ್ಲಿ ಇರಿಸಿತ್ತು. ಇದರ ಜೊತೆಗೆ, ದೇಶದಲ್ಲಿ ಒಂದು ವರ್ಷ ತುರ್ತುಪರಿಸ್ಥಿತಿ ಘೋಷಣೆ ಮಾಡಿತ್ತು.
ಇದನ್ನೂ ಓದಿ: ಆಂಗ್ ಸಾನ್ ಸೂಕಿ ಬಿಡುಗಡೆಗೆ ಕರೆ ನೀಡಿದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ, ಜೋ ಬೈಡನ್
ಬಳಿಕ ಸೂಕಿ ಮೇಲೆ ದೇಶದ್ರೋಹ ಹಾಗೂ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಹೊರಿಸಿ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು. ಇವರ ಬಿಡುಗಡೆಗೆ ವಿಶ್ವಸಂಸ್ಥೆ ಹಾಗೂ ಹಲವು ರಾಷ್ಟ್ರಗಳು ಒತ್ತಾಯಿಸಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಇಂದು ಈ ಬಗ್ಗೆ ವಿಚಾರಣೆ ನಡೆಸಿರುವ ಅಲ್ಲಿನ ನ್ಯಾಯಾಲಯ ಸೂಕಿಗೆ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.