ಬೀಜಿಂಗ್: ಆಗ್ನೇಯ ಚೀನಾದಲ್ಲಿ ಕೊರೋನಾ ವೈರಸ್ ಶಂಕಿತರನ್ನು ಪ್ರತ್ಯೇಕವಾಗಿ ಇಡಲಾಗಿದ್ದ ಹೋಟೆಲ್ ಕಟ್ಟಡ ಕುಸಿದು ಮೃತಪಟ್ಟವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.
ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬರನ್ನು ಸತತ 69 ಗಂಟೆಗಳ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ. ಮಂಗಳವಾರ ಮಧ್ಯಾಹ್ನ ವ್ಯಕ್ತಿಯನ್ನು ರಕ್ಷಿಸಿದ ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಶನಿವಾರ ಈ ಹೋಟೆಲ್ ಕುಸಿದಿತ್ತು. ಅಂದು 9 ಮಂದಿ ಕಾಣೆಯಾಗಿದ್ದರು.
52 ಗಂಟೆಗಳ ಕಾಲ ಅವಶೇಷಗಳಡಿ ಸಿಲುಕಿಕೊಂಡಿದ್ದ 10 ವರ್ಷದ ಬಾಲಕ ಮತ್ತು ತಾಯಿಯನ್ನು ಸೋಮವಾರ ಮಧ್ಯರಾತ್ರಿ ರಕ್ಷಿಸಲಾಯಿತು. ಬದುಕುಳಿದ ಮೂವರ ಸ್ಥಿತಿ ಇನ್ನಷ್ಟೇ ತಿಳಿದುಬರಬೇಕಿದೆ ಎಂದು ಇಲ್ಲಿನ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಕೊರೋನಾ ವೈರಸ್ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಕ್ವಾನ್ಜೌ ನಗರದ ಹೋಟೆಲ್ನಲ್ಲಿ ಶಂಕಿತರನ್ನು ಪ್ರತ್ಯೇಕವಾಗಿ ಇಡುವ ಮೂಲಕ ಅವರ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗುತಿತ್ತು.
ಸದ್ಯ ಚೀನಾದಲ್ಲಿ 80,956 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಅದರಲ್ಲಿ 61,559 ಮಂದಿ ಚೇತರಿಸಿಕೊಂಡಿದ್ದಾರೆ. 3,162 ಜನರು ಮೃತಪಟ್ಟಿದ್ದಾರೆ.