ಟೋಕಿಯೋ(ಜಪಾನ್): 'ಹಗಿಬಿಸ್' ಚಂಡಮಾರುತದ ಅಬ್ಬರಕ್ಕೆ ಜಪಾನ್ ತತ್ತರಿಸಿದ್ದು, ಸಾವಿನ ಸಂಖ್ಯೆ 70ಕ್ಕೆ ಏರಿಕೆಯಾಗಿದೆ.
ನಿರಂತರ ಮಳೆ ಹಾಗೂ ಗಾಳಿಯಿಂದಾಗಿ ರಕ್ಷಣಾ ಕಾರ್ಯಕ್ಕೆ ತೊಡಕುಂಟಾಗಿದೆ. ಹದಿನೈದು ಮಂದಿ ಇನ್ನೂ ನಾಪತ್ತೆಯಾಗಿದ್ದು ಹುಡುಕಾಟ ಜಾರಿಯಲ್ಲಿದೆ. ಉತ್ತರ ಟೋಕಿಯೋದ ಫುಕುಶಿಮಾದಲ್ಲಿ 18 ಮಂದಿ ಸಾವನ್ನಪ್ಪಿದ್ದು, ದೇಶದಲ್ಲೇ ಹೆಚ್ಚಿನ ಸಾವಿನ ಪ್ರಕರಣ ಇಲ್ಲಿ ದಾಖಲಾಗಿದೆ. ಹಗಿಬಿಸ್ ಎಂದರೆ ಫಿಲಿಫೈನ್ಸ್ ಭಾಷೆಯಲ್ಲಿ ವೇಗ ಎನ್ನುವ ಅರ್ಥ ನೀಡುತ್ತದೆ.
ಜಪಾನ್ ಹವಾಮಾನ ಇಲಾಖೆಯು ಇಬರಾಕಿ, ಟೋಚಿಗಿ, ಫುಕುಶಿಮಾ, ಮಿಯಾಗಿ ಮೊದಲಾದ ಪ್ರದೇಶಗಳ ನಾಗರಿಕರಿಗೆ ಈ ಬಗ್ಗೆ ಸೂಚನೆ ನೀಡಿತ್ತು. ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ರಾಜಧಾನಿ ಟೋಕಿಯೋ ಹಾಗೂ ಪಕ್ಕದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ವಿಮಾನಯಾನ ಸೇವೆ ರದ್ದು ಮಾಡಲಾಗಿದೆ. ಜೊತೆಗೆ ಟೋಕಿಯೋ, ನಗೋಯಾ ಮತ್ತು ಒಸಾಕಾ ನಡುವೆ ಸಂಚರಿಸುವ ಬುಲೆಟ್ ರೈಲುಗಳ ಸಂಚಾರವನ್ನೂ ನಿಷೇಧಿಸಲಾಗಿದೆ.
ಇನ್ನೊಂದೆಡೆ, ಒಟ್ಟು ಎಂಟು ಪ್ರಾಂತ್ಯಗಳಿಂದ ಸುಮಾರು 9,36,113 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಜಪಾನ್‌ನ ಅಗ್ನಿಶಾಮಕ ಮತ್ತು ವಿಪತ್ತು ನಿರ್ವಹಣಾ ಸಂಸ್ಥೆ (ಎಫ್‌ಡಿಎಂಎ) ತಿಳಿಸಿದೆ.
ಟೈಫೂನ್ ಎಂದರೇನು?
ಟೈಫೂನ್ ಎಂದರೆ ಚಂಡಮಾರುತ. ಇದು ಉಷ್ಣವಲಯದ ಚಂಡಮಾರುತವಾಗಿದ್ದು, ವಾಯುವ್ಯ ಪೆಸಿಫಿಕ್ ಭಾಗದಲ್ಲಿ 'ಟೈಫೂನ್' ಎಂದು ಕರೆಯುತ್ತಾರೆ. ಇನ್ನೊಂದೆಡೆ ಈಶಾನ್ಯ ಪೆಸಿಫಿಕ್ ಮತ್ತು ಉತ್ತರ ಅಟ್ಲಾಂಟಿಕ್ ಭಾಗದಲ್ಲಿ ಇದನ್ನು 'ಹರಿಕೇನ್' ಎಂದು ಕರೆಯಲಾಗುತ್ತದೆ. ಉಳಿದಂತೆ ಬೇರೆ ಭಾಗಗಳಲ್ಲಿ ಇದನ್ನು ಉಷ್ಣವಲಯದ ಚಂಡಮಾರುತ, ತೀವ್ರ ಉಷ್ಣವಲಯದ ಚಂಡಮಾರುತ ಅಥವಾ ತೀವ್ರ ಚಂಡಮಾರುತ ಎಂದು ಕರೆಯಲಾಗುತ್ತದೆ.