ಜಿನೀವಾ: ಇಟಲಿಯಲ್ಲಿ ಕೊರೊನಾ ಸೋಂಕಿತರ ಸಾವಿನ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತಿದೆ. ಒಂದೇ ದಿನದಲ್ಲಿ 627 ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಚೀನಾದ ವುಹಾನ್ನಲ್ಲಿ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ ಎಂಬ ಅಂಶ ಭರವಸೆ ಮೂಡಿಸುತ್ತಿದೆ.
10 ಸಾವಿರ ಗಡಿ ದಾಟಿದ ಕೊರೊನಾ ಸಾವು ಪ್ರಮಾಣ:
ಕೊರೊನಾ ಸಾಂಕ್ರಾಮಿಕ ರೋಗದಿಂದ ವಿಶ್ವದಾದ್ಯಂತ ಸಂಭವಿಸಿದ ಸಾವುಗಳ ಪ್ರಮಾಣ 10,000ದ ಗಡಿ ದಾಟಿದೆ. ಸೋಂಕಿತರ ಸಂಖ್ಯೆ 2,50,000 ತಲುಪಿದೆ. ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಸರ್ಕಾರದ ಹಲವು ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಂಡಿದ್ದರೂ ಇಟಲಿಯಲ್ಲಿ ಮತ್ತೆ ಸಾವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. 6 ಕೋಟಿ ಜನಸಂಖ್ಯೆ ಹೊಂದಿರುವ ಇಟಲಿ, ವಿಶ್ವದಲ್ಲಿ ಕೊರೊನಾ ಸೋಂಕಿನಿಂದ ಸತ್ತವರ ಪೈಕಿ 36.6 ರಷ್ಟು ಪಾಲು ಹೊಂದಿದೆ.
ವುಹಾನ್- ಆಶಾಕಿರಣ:
ಕಳೆದ ವರ್ಷ ಡಿಸೆಂಬರ್ನಲ್ಲಿ ಮಾರಕ ವೈರಸ್ ಕಾಣಿಸಿಕೊಂಡಿದ್ದ ಚೀನಾದ ವುಹಾನ್ನಲ್ಲಿ ಕಳೆದ 24 ಗಂಟೆಗಳಲ್ಲಿ ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ. 'ಅತ್ಯಂತ ತೀವ್ರತರವಾದ ಪರಿಸ್ಥಿತಿ ಕೂಡ ಬದಲಾಗುತ್ತದೆ ಎಂಬ ಭರವಸೆಯನ್ನು ವುಹಾನ್ ಪ್ರಪಂಚದ ಇತರ ಭಾಗಗಳಿಗೆ ನೀಡಿದೆ ಎಂದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸೋಂಕಿನಿಂದ ನಲುಗುತ್ತಿದೆ ಅಮೆರಿಕ:
ಅಮೆರಿಕದ ಕ್ಯಾಲಿಫೋರ್ನಿಯಾ ಕೊರೊನಾ ಸೋಂಕಿನಿಂದ ನಲುಗುತ್ತಿದ್ದು ತಮ್ಮ ಜನರಿಗೆ ಮನೆಗಳನ್ನು ಬಿಟ್ಟು ಹೊರ ಬರಬೇಡಿ ಎಂದು ಸೂಚನೆ ನೀಡಿದೆ. ಫ್ರಾನ್ಸ್, ಇಟಲಿ, ಸ್ಪೇನ್ ಮತ್ತು ಇತರ ಯುರೋಪಿಯನ್ ದೇಶಗಳಲ್ಲೂ ಇದೇ ರೀತಿಯ ಸೂಚನೆ ನೀಡಲಾಗಿದ್ದು, ಒಂದು ವೇಳೆ ಜನ ಈ ನಿಯಮ ಮುರಿದರೆ ಪೊಲೀಸರು ದಂಡ ವಿಧಿಸುತ್ತಾರೆ.
ಜಗತ್ತಿನ ನಾನಾ ಕಡೆ ಪಬ್, ಬಾರ್ ರೆಸ್ಟೋರೆಂಟ್ ಚಿತ್ರ ಮಂದಿರ ಬಂದ್:
ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ಕೊರೊನಾ ವೈರಸ್ ಆತಂಕವನ್ನು ಉಂಟುಮಾಡಿದ್ದು, ಪಬ್, ಬಾರ್, ಹೋಟೆಲ್, ರೆಸ್ಟೋರೆಂಟ್, ಚಿತ್ರಮಂದಿರ, ಮಾಲ್ಗಳನ್ನು ಬಂದ್ ಮಾಡಲಾಗಿದ್ದು, ಹಲವು ನಗರಗಳು ಸ್ಥಬ್ಧವಾಗಿವೆ.
ಇಟಲಿಯಲ್ಲಿ ಅತಿ ಹೆಚ್ಚು ಸಾವು ನೋವು:
ಕಳೆದ ಮೂರು ದಿನಗಳಲ್ಲಿ 1,500 ಕ್ಕೂ ಹೆಚ್ಚು ಸಾವುನೋವುಗಳನ್ನು ಕಂಡ ಇಟಲಿಯಲ್ಲಿ ಸಾವಿನ ಸಂಖ್ಯೆ 4,032ಕ್ಕೆ ತಲುಪಿದ್ರೆ, ಚೀನಾದಲ್ಲಿ ಇದುವರೆಗೂ 3,248 ಸಾವುಗಳು ಸಂಭವಿಸಿವೆ.
ಯೂರೋಪ್‌ನಲ್ಲಿ ಸಾವಿನ ಪ್ರಮಾಣ ಹೆಚ್ಚು:
ವಿಶ್ವದಾದ್ಯಂತ ಕೊವಿಡ್-19 ಸೋಂಕಿನಿಂದ ಸಾವಿಗೀಡಾದವರಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಯುರೋಪ್ ಭಾಗದವರಾಗಿದ್ದಾರೆ. ಆದಾಗ್ಯೂ, ಸಾಯುವವರಲ್ಲಿ ಅನೇಕರು ಇತರ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಮತ್ತು ಅನೇಕ ದೇಶಗಳಲ್ಲಿ ಪರೀಕ್ಷೆಯ ಕೊರತೆಯಿಂದಾಗಿ ಸೋಂಕಿನ ಪ್ರಮಾಣವು ಅನಿಶ್ಚಿತವಾಗಿರುವುದರಿಂದ ನಿಖರವಾದ ಅಂಕಿ ಅಂಶಗಳು ತಿಳಿದುಬಂದಿಲ್ಲ.