ಜೆರುಸಲೇಂ : ಹೊಸ ರೂಪಾಂತರ ಒಮಿಕ್ರಾನ್ ತೀವ್ರವಾಗಿ ಹರಡುತ್ತಿರುವ ಬೆನ್ನಲ್ಲೇ ಮಕ್ಕಳಿಗೆ ಕೊರೊನಾ ವಿರುದ್ಧ ಲಸಿಕೆ ಹಾಕುವಂತೆ ಪೋಷಕರಿಗೆ ಇಸ್ರೇಲ್‌ನ ಪ್ರಧಾನಮಂತ್ರಿ ಕರೆ ನೀಡಿದ್ದಾರೆ. ಇದರ ನಡುವೆ ಅಧಿಕಾರಿಗಳು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಪ್ರಯಾಣ ನಿಷೇಧವನ್ನು ವಿಸ್ತರಿಸಲು ಸಿದ್ಧರಾಗಿದ್ದಾರೆ.
ದೂರದರ್ಶನದ ಭಾಷಣದಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ಹೆಚ್ಚಿನ ವಿದೇಶಿಯರನ್ನು ದೇಶಕ್ಕೆ ಪ್ರವೇಶಿಸುವುದನ್ನು ನಿಷೇಧಿಸುವ ಹಿಂದಿನ ಕ್ರಮಗಳಿಗೆ ಧನ್ಯವಾದ. ಈ ಮೂಲಕ ಹೊಸ ರೂಪಾಂತರದ ಪ್ರಕರಣಗಳ ಸಂಖ್ಯೆ ತುಲನಾತ್ಮಕವಾಗಿ ಕಡಿಮೆಯಾಗಿದೆ ಎಂದು ನಫ್ತಾಲಿ ಬೆನೆಟ್ ಹೇಳಿದ್ದಾರೆ.
ಇದನ್ನೂ ಓದಿ: ಒಮಿಕ್ರಾನ್ ತೀವ್ರತೆ ವಿರುದ್ಧ ಬೂಸ್ಟರ್ ಡೋಸ್ ಶೇ.80 ರಷ್ಟು ಪರಿಣಾಮಕಾರಿ..
ಐದನೇ ಅಲೆ ಪ್ರಾರಂಭವಾಗಿದೆ ಎಂದು ಹೇಳಿದ ಅವರು, ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸುವುದು ಈ ಸಂದರ್ಭದಲ್ಲಿ ಪ್ರಮುಖ ಎಂದಿದ್ದಾರೆ. ಇನ್ನು ಇಸ್ರೇಲ್ ಕಳೆದ ತಿಂಗಳು 5 ರಿಂದ 12 ವರ್ಷದೊಳಗಿನ ಕಿರಿಯ ಮಕ್ಕಳಿಗೆ ಲಸಿಕೆಗಳನ್ನು ನೀಡಲು ಪ್ರಾರಂಭಿಸಿದೆ. ಆದರೆ, ಆ ವಯಸ್ಸಿನ ಗುಂಪಿನಲ್ಲಿ ವ್ಯಾಕ್ಸಿನೇಷನ್ ದರವು ನಿರಾಶಾದಾಯಕವಾಗಿ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಪೋಷಕರು ತಮ್ಮ ಮಕ್ಕಳನ್ನು ರಕ್ಷಿಸುವ ಅಗತ್ಯವಿದೆ. ಮಕ್ಕಳನ್ನು ಮುಂಬರುವ ಒಮಿಕ್ರಾನ್‌ಗೆ ಒಡ್ಡಲು ಮತ್ತು ಅವರನ್ನು ದುರ್ಬಲಗೊಳಿಸಲು ಮುಂದಾಗಬಾರದು ಎಂದ ಅವರು, ಮುಂಬರುವ ವಾರಗಳಲ್ಲಿ ಪ್ರಕರಣಗಳ ಹೆಚ್ಚಳವನ್ನು ಊಹಿಸಿದ ಅವರು, ಸರ್ಕಾರವು ಹೊಸ ಸುರಕ್ಷತಾ ಶಿಫಾರಸುಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ. ಈ ಮಧ್ಯೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು, ಮಾಸ್ಕ್ ಧರಿಸಲು ಮತ್ತು ಸಾಧ್ಯವಾದಾಗಲೆಲ್ಲಾ ಮನೆಯಿಂದಲೇ ಕೆಲಸ ಮಾಡಲು ಜನರನ್ನು ಒತ್ತಾಯಿಸಿದರು.
ಇಸ್ರೇಲ್ ಈ ವರ್ಷದ ಆರಂಭದಲ್ಲಿ ವಿಶ್ವ-ಪ್ರಮುಖ ವ್ಯಾಕ್ಸಿನೇಷನ್ ಅಭಿಯಾನವನ್ನು ಪ್ರಾರಂಭಿಸಿತು ಮತ್ತು ಇಸ್ರೇಲ್‌ನ 9.3 ಮಿಲಿಯನ್ ಜನರಲ್ಲಿ 4.1 ಮಿಲಿಯನ್‌ಗಿಂತಲೂ ಹೆಚ್ಚು ಜನರು ಮೂರನೇ ಡೋಸ್ ಫಿಜರ್/ಬಯೋಎನ್‌ಟೆಕ್ ಅನ್ನು ಸ್ವೀಕರಿಸಿದ್ದಾರೆ.