ಜಲಾಲಾಬಾದ್ (ಅಫ್ಘಾನಿಸ್ತಾನ್): ಪೂರ್ವ ಅಫ್ಘಾನಿಸ್ತಾನದಲ್ಲಿರುವ ಜಲಾಲಾಬಾದ್ ಕಾರಾಗೃಹದ ಮೇಲೆ ಐಸಿಸ್ ಉಗ್ರರು ದಾಳಿ ನಡೆಸಿದ್ದರ ಪರಿಣಾಮವಾಗಿ ಸುಮಾರು 28 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಭಾನುವಾರ ರಾತ್ರಿ ಕಾರಾಗೃಹದ ಪ್ರವೇಶದ್ವಾರದಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟಿಸಿ ಒಳನುಗ್ಗಿದ ಭಯೋತ್ಪಾದಕರು, ಅಲ್ಲಿನ ಸಿಬ್ಬಂದಿ ಮೇಲೆ ಗುಂಡಿನ ಮಳೆಗರೆದಿದ್ದಾರೆ. ಈ ವೇಳೆ ಸ್ಥಳಕ್ಕೆ ಧಾವಿಸಿದ ಆಫ್ಘನ್ ಭದ್ರತಾ ಪಡೆ ಹಾಗೂ ಐಸಿಸ್ ಉಗ್ರರ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ.
ಈ ದಾಳಿಯಲ್ಲಿ ಕೆಲವು ಸಾರ್ವಜನಿಕರು, ಜೈಲು ಸಿಬ್ಬಂದಿ ಹಾಗೂ ಅಫ್ಘಾನ್ ಭದ್ರತಾ ಪಡೆಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಿಂದ ಸುಮಾರು 115 ಕಿಲೋಮೀಟರ್ ದೂರದಲ್ಲಿರುವ ಈ ಕಾರಾಗೃಹ ಮೇಲೆ ದಾಳಿ ನಡೆಸಲಾಗಿದ್ದು, ಮೂವರು ಉಗ್ರರನ್ನು ಬೇಟೆಯಾಡಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಪ್ಘಾನ್ ಸರ್ಕಾರ ತಿಳಿಸಿದೆ.
ಕೆಲವು ಭಯೋತ್ಪಾದಕರು ಹತ್ತಿರದ ವಸತಿ ಪ್ರದೇಶಗಳಲ್ಲಿ ಅವಿತುಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಅವರ ಶೋಧ ಕಾರ್ಯ ಕಷ್ಟವಾಗುತ್ತಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.
ನಂಗರ್ವಾರ್ ಪ್ರಾಂತ್ಯದಿಂದ ಕೇವಲ ಅರ್ಧ ಮೈಲಿ ದೂರದಲ್ಲಿರುವ ಈ ಕಾರಾಗೃಹವನ್ನು ಆಫ್ಘನ್ ಭದ್ರತಾ ಪಡೆ, ರಕ್ಷಣಾ ಸಿಬ್ಬಂದಿ, ಶಸ್ತ್ರಾಸ್ತ್ರಗಳನ್ನು ತುಂಬಿದ ವಾಹನಗಳು ಸುತ್ತುವರೆದಿದ್ದು, ಸುತ್ತಲಿನ ವಸತಿ ಪ್ರದೇಶಗಳಲ್ಲಿನ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ.
ಈ ದಾಳಿಯ ವೇಳೆ ಕಾರಾಗೃಹದಲ್ಲಿದ್ದ 1500 ಕೈದಿಗಳಲ್ಲಿ ಕೆಲವು ಕೈದಿಗಳು ಪರಾರಿಯಾಗಿದ್ದಾರೆಂದು ಹೇಳಲಾಗುತ್ತಿದೆ. ಪರಾರಿ ಆದವರಲ್ಲಿ ಐಸಿಸ್ಗೆ ಸಂಬಂಧಪಟ್ಟ ಕೈದಿಗಳೂ ಇದ್ದರೆಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.