ಕಾಬೂಲ್: ಮಸೀದಿಯ ಇಮಾಮ್ ಸೇರಿದಂತೆ 12 ಜನರನ್ನು ಬಲಿ ತೆಗೆದುಕೊಂಡ ಕಾಬೂಲ್‌ನ ಮಸೀದಿ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿದೆ.
ಭಯೋತ್ಪಾದಕ ಗುಂಪಿನ ಅಧಿಕೃತ ಪ್ರಚಾರವನ್ನು ಪ್ರಕಟಿಸುವ ನಶೀರ್ ನ್ಯೂಸ್ ಏಜೆನ್ಸಿ ಮೂಲಕ ಹೇಳಿಕೆ ನೀಡಿರುವ ಐಎಸ್, ಮೊಹಮ್ಮದ್ ನುಮನ್ ಎಂದು ಗುರುತಿಸಲ್ಪಟ್ಟ ಇಮಾಮ್ ಜಿಹಾದಿಗಳ ವಿರುದ್ಧದ ಹೋರಾಟಕ್ಕೆ ಪ್ರೋತ್ಸಾಹ ನೀಡುತ್ತಿದ್ದನು ಎಂದು ಆರೋಪಿಸಿದೆ. ಅಷ್ಟೇ ಅಲ್ಲದೆ, ಮಸೀದಿಯಲ್ಲಿ ಕ್ಯಾಲಿಫಟ್ನ ಸೈನಿಕರು ಸ್ಫೋಟಕವನ್ನು ಇಟ್ಟಿದ್ದರು ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಕಾಬೂಲ್ ಪ್ರಾಂತ್ಯದ ಶಕರ್ ದಾರಾ ಜಿಲ್ಲೆಯ ಮಸೀದಿಯೊಳಗೆ ಈ ಸ್ಫೋಟ ಸಂಭವಿಸಿದೆ. ತಾಲಿಬಾನ್ ಮತ್ತು ಸರ್ಕಾರಿ ಪಡೆಗಳ ನಡುವೆ ತಾತ್ಕಾಲಿಕ ಒಪ್ಪಂದ ಜಾರಿಗೆ ಬಂದ ನಂತರವೂ ಈ ಸ್ಫೋಟ ನಡೆದಿರುವುದು ಆತಂಕಕ್ಕೆ ಎಡೆ ಮಾಡಿದೆ.
ಇದನ್ನೂ ಓದಿ: ರಂಜಾನ್ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ.. 12 ಮಂದಿ ದುರ್ಮರಣ
ಈದ್ ಆಚರಣೆ ಹಿನ್ನೆಲೆಯಲ್ಲಿ ಯುದ್ಧದ ವಾತಾವರಣವನ್ನು ಬದಿಗೊತ್ತಿ ಶಾಂತಿ ಒಪ್ಪಂದದ ನಿರ್ಧಾರಕ್ಕೆ ಬರಲಾಗಿತ್ತು. ಎರಡು ದಶಕಗಳ ತಾಲಿಬಾನ್ ಮತ್ತು ಸರ್ಕಾರದ ನಡುವಿನ ಸಂಘರ್ಷದಲ್ಲಿ ಇದು ನಾಲ್ಕನೆಯ ಒಪ್ಪಂದವಾಗಿದೆ. ಮೇ 1ರಂದು ಅಮೆರಿಕದ ಮಿಲಿಟರಿ ತನ್ನ 2,500 ಸೈನಿಕರನ್ನು ಅಫ್ಘಾನಿಸ್ತಾನದಿಂದ ಹಿಂತೆಗೆದುಕೊಳ್ಳಲು ಪ್ರಾರಂಭಿಸಿದ ನಂತರ ಮಾರಣಾಂತಿಕ ಹಿಂಸಾಚಾರ ನಡೆಯುತ್ತಿರುವುದು ದೇಶವನ್ನು ಬೆಚ್ಚಿ ಬೀಳಿಸಿದೆ.
ಯುಎನ್ ವರದಿಯ ಪ್ರಕಾರ, IS ಭಯೋತ್ಪಾದಕ ಗುಂಪು ದೇಶದ ವಿವಿಧ ಭಾಗಗಳಲ್ಲಿ ದಾಳಿ ನಡೆಸುವ ಸಾಧ್ಯತೆಯಿದೆ.