ಬಾಗ್ದಾದ್(ಇರಾಕ್): ಇರಾಕ್ ಪ್ರಧಾನಿ ಮುಸ್ತಫಾ ಅಲ್ ಕದಿಮಿ ಮನೆ ಮೇಲೆ ಕಿಡಿಗೇಡಿಗಳಿಂದ ಡ್ರೋನ್ ದಾಳಿ ಯತ್ನ ನಡೆದಿದ್ದು, ಪ್ರಯತ್ನ ವಿಫಲಗೊಂಡಿದೆ. ಅದೃಷ್ಟವಶಾತ್ ಪಿಎಂಗೆ ಯಾವುದೇ ತೊಂದರೆ ಆಗಿಲ್ಲ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂದು ಮುಂಜಾನೆ ಪ್ರಧಾನಿ ನಿವಾಸವನ್ನು ಗುರಿಯಾಗಿಸಿಕೊಂಡು ಸಶಸ್ತ್ರ ಡ್ರೋನ್‌ನೊಂದಿಗೆ ಹತ್ಯೆಯ ಯತ್ನ ನಡೆದಿದ್ದು, ಪಿಎಂ ಬದುಕುಳಿದಿದ್ದಾರೆ ಮತ್ತು ಯಾವುದೇ ಹಾನಿಗೊಳಗಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಗ್ದಾದ್‌ನ ಭದ್ರತಾ ಮತ್ತು ಹಸಿರು ವಲಯ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಏಳು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಇರಾಕ್ ಅಧಿಕಾರಿಗಳು ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ. ಅಧಿಕೃತ ಹೇಳಿಕೆಗಳನ್ನು ನೀಡಲು ಅವರಿಗೆ ಅಧಿಕಾರವಿಲ್ಲದ ಕಾರಣ ಅವರು ಗೌಪ್ಯತೆಯ ಷರತ್ತಿನ ಮೇಲೆ ಮಾತನಾಡಿದರು.
ದಾಳಿಯ ಸ್ವಲ್ಪ ಸಮಯದ ನಂತರ ಪ್ರಧಾನಿ ಟ್ವೀಟ್ ಮಾಡಿ ವಿಷಯ ಹಂಚಿಕೊಂಡಿದ್ದಾರೆ. "ದೇಶದ್ರೋಹಿ ರಾಕೆಟ್ಗಳು ಭದ್ರತಾ ಪಡೆಗಳನ್ನು ಸ್ವಲ್ಪವೂ ಅಲುಗಾಡಿಸಲು ಸಾಧ್ಯವಿಲ್ಲ. ನಾನು ಚೆನ್ನಾಗಿದ್ದೇನೆ ಮತ್ತು ನನ್ನ ಜನರ ನಡುವೆ ಇದ್ದೇನೆ. ದೇವರಿಗೆ ಧನ್ಯವಾದಗಳು'' ಎಂದು ಅವರು ಬರೆದಿದ್ದಾರೆ.
ಸರ್ಕಾರದ ಹೇಳಿಕೆಯೊಂದರಲ್ಲಿ, ಡ್ರೋನ್ ದಾಳಿ ಬಗ್ಗೆ ಮತ್ತು ಪ್ರಧಾನಿ ಸುರಕ್ಷಿತವಾಗಿರುವ ಬಗ್ಗೆ ಖಚಿತಪಡಿಸಿದ್ದಾರೆ. ಈ ವಿಫಲ ಪ್ರಯತ್ನಕ್ಕೆ ಸಂಬಂಧಿಸಿದಂತೆ ಭದ್ರತಾ ಪಡೆಗಳು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ ಎಂದು ತಿಳಿಸಿದ್ದಾರೆ.