ಬಾಗ್ದಾದ್(ಇರಾಕ್): ಸಾಮ್ರಾ ನಗರದ ಸೆಂಟ್ರಲ್ ಸಿಟಿ ಬಳಿ ರಾತ್ರಿಯಿಡೀ ಸಂಘಟಿತ ದಾಳಿ ನಡೆಸಿದ ಐಎಸ್ ಉಗ್ರರು, ಕನಿಷ್ಠ 10 ಇರಾಕ್ ಸೇನಾ ಸಿಬ್ಬಂದಿಯನ್ನು ಕೊಂದಿದ್ದಾರೆ ಎಂದು ಇರಾಕ್ ಭದ್ರತಾ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಒಂದು ಕಾಲದಲ್ಲಿ ದೇಶದ ದೊಡ್ಡ ಪ್ರದೇಶಗಳನ್ನು ನಿಯಂತ್ರಿಸುತ್ತಿದ್ದ ಉಗ್ರಗಾಮಿ ಗುಂಪು ಮತ್ತೆ ಆಕ್ರಮಣ ನಡೆಸುತ್ತಿದೆ ಎಂಬ ಕಳವಳಕ್ಕೆ ಈ ದಾಳಿ ಎಡೆಮಾಡಿಕೊಟ್ಟಿದೆ.
ದೇಶದ ಆರ್ಥಿಕತೆ ಹದಗೆಟ್ಟಿದ್ದು, ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕೊರೊನಾ ವೈರಸ್ ಸೃಷ್ಟಿಸಿರುವ ಈ ಅವಾಂತರದ ಮಧ್ಯೆ ಉಗ್ರ ಸಂಘಟನೆಗಳು ಈ ಸಂದರ್ಭವನ್ನು ಬಳಸಿಕೊಳ್ಳುತ್ತಿರುವುದು ಅತಂಕಕ್ಕೆ ಕಾರಣವಾಗಿದೆ.
ಮೂರು ವರ್ಷಗಳ ಸತತ ಹೋರಾಟದ ನಂತರ ಇರಾಕ್, 2017 ರ ಡಿಸೆಂಬರ್‌ನಲ್ಲಿ ಐಎಸ್ ವಿರುದ್ಧ ಜಯ ಘೋಷಿಸಿತು. ಆದರೆ ಈ ಗುಂಪು ಇರಾಕ್ ಮತ್ತು ನೆರೆಯ ಸಿರಿಯಾದ ಮೂರನೇ ಒಂದು ಭಾಗವನ್ನು ನಿಯಂತ್ರಿಸುತ್ತಾ, ಇಸ್ಲಾಮಿಕ್ ಕಾನೂನಿನ ಕಠಿಣ ಮತ್ತು ಹಿಂಸಾತ್ಮಕ ವ್ಯಾಖ್ಯಾನಕ್ಕೆ ಅನುಗುಣವಾಗಿ ಇಲ್ಲಿ ದಾಳಿ ನಡೆಸುತ್ತಿದೆ.