ಟೆಹ್ರಾನ್ (ಇರಾನ್): ಇರಾನಿನ ನೌಕಾಪಡೆಯ ಅತಿದೊಡ್ಡ ಯುದ್ಧನೌಕೆ ಬೆಂಕಿಗೆ ಆಹುತಿಯಾಗಿದ್ದು, ಒಮಾನ್ನ ಸಮುದ್ರದಲ್ಲಿ ಮುಳುಗಡೆಯಾಗಿದೆ ಎಂದು ಸೆಮಿಫಿಸಿಯಲ್ ಸಂಸ್ಥೆ ವರದಿ ಮಾಡಿದೆ. ಇರಾನ್‌ನ ಮುಖ್ಯ ತೈಲ ಟರ್ಮಿನಲ್ ಆಗಿ ಕಾರ್ಯನಿರ್ವಹಿಸುವ ಖಾರ್ಗ್ ಹೆಸರಿನ ಬೆಂಬಲ ಯುದ್ಧನೌಕೆ ಉಳಿಸಲು ಪ್ರಯತ್ನಗಳು ವಿಫಲವಾಗಿವೆ ಎಂದು ವರದಿಯಾಗಿದೆ.
ಮಂಗಳವಾರ ಮುಂಜಾನೆ 2:25ರ ಸುಮಾರಿಗೆ ಯುದ್ಧನೌಕೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದರು. ಆದರೆ ಬೆಂಕಿ ಸಂಪೂರ್ಣವಾಗಿ ನೌಕೆಗೆ ಆವರಿಸಿಕೊಂಡ ಪರಿಣಾಮ ಟೆಹ್ರಾನ್ನಿಂದ ಸುಮಾರು 1,270 ಕಿ.ಮೀ ದೂರದ ಇರಾನಿನ ಬಂದರಾದ ಜಾಸ್ಕ್ ಬಳಿ ಹಡಗು ಮುಳುಗಿದೆ.
ನೌಕೆಗೆ ಬೆಂಕಿ ಹೊತ್ತಿಕೊಂಡ ತಕ್ಷಣವೇ ಸಿಬ್ಬಂದಿ ಲೈಫ್ ಜಾಕೆಟ್ ಧರಿಸಿ ಇನ್ನೊಂದು ಹಡಗಿಗೆ ತೆರಳಿದ್ದಾರೆ. ಖಾರ್ಗ್ ಇರಾನಿನ ನೌಕಾಪಡೆಯ ಕೆಲವು ಹಡಗುಗಳಲ್ಲಿ ಒಂದಾಗಿದ್ದು, ಇತರ ಹಡಗುಗಳಿಗೆ ಸಮುದ್ರದಲ್ಲಿ ಇಂಧನ ಪೂರೈಸುವ ಕಾರ್ಯ ಮಾಡುತ್ತಿತ್ತು.
ಇದು ಭಾರಿ ಸರಕುಗಳನ್ನು ಸಾಗಿಸುವ ಮತ್ತು ಹೆಲಿಕಾಪ್ಟರ್‌ಗಳ ಉಡಾವಣಾ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿತ್ತು. 1979ರಲ್ಲಿ ಇರಾನ್‌ನ ಇಸ್ಲಾಮಿಕ್ ಕ್ರಾಂತಿಯ ನಂತರದ ಸುದೀರ್ಘ ಮಾತುಕತೆಗಳ ಬಳಿಕ ಬ್ರಿಟನ್‌ನಲ್ಲಿ ನಿರ್ಮಿಸಲಾದ ಮತ್ತು 1977 ರಲ್ಲಿ ಪ್ರಾರಂಭಿಸಲಾದ ಈ ಯುದ್ಧನೌಕೆ 1984ರಲ್ಲಿ ಇರಾನಿನ ನೌಕಾಪಡೆಗೆ ಸೇರ್ಪಡೆಗೊಂಡಿತ್ತು.
ಖಾರ್ಗ್ ನೌಕೆ ಬೆಂಕಿಗಾಹುತಿಯಾಗಿರುವುದಕ್ಕೆ ಇರಾನಿನ ಅಧಿಕಾರಿಗಳು ಯಾವುದೇ ಕಾರಣವನ್ನು ನೀಡಿಲ್ಲ. ಆದಾಗ್ಯೂ ಒಮನ್ ಕೊಲ್ಲಿಯಲ್ಲಿನ ಹಡಗುಗಳನ್ನು ಗುರಿಯಾಗಿಸಿಕೊಂಡು 2019ರಿಂದ ಸರಣಿ ಸ್ಫೋಟಗಳು ಸಂಭವಿಸುತ್ತಿವೆ. ಈಗ ನೌಕೆ ಬೆಂಕಿಗಾಹುತಿಯಾಗಿದೆ.