ಜಕಾರ್ತ(ಇಂಡೋನೇಷ್ಯಾ): ಹವಾಮಾನ ಬದಲಾವಣೆಯಿಂದ ಸಮುದ್ರ ಮಟ್ಟದಲ್ಲಿ ಏರಿಕೆಯಾಗಿ, ವಿಶ್ವದಲ್ಲಿ ಅತ್ಯಂತ ವೇಗವಾಗಿ ಮುಳುಗುತ್ತಿರುವ ನಗರಗಳ ಪಟ್ಟಿಯಲ್ಲಿ ಇಂಡೋನೇಷ್ಯಾದ ರಾಜಧಾನಿಯಾದ ಜಕಾರ್ತ ಕೂಡಾ ಒಂದಾಗಿದೆ. ಈ ಹಿನ್ನೆಲೆಯಲ್ಲಿ ರಾಜಧಾನಿಯನ್ನು ಬದಲಾಯಿಸಲು ಅಲ್ಲಿನ ಸರ್ಕಾರ ನಿರ್ಧಾರ ಮಾಡಿದೆ.
ಇತ್ತೀಚೆಗಷ್ಟೇ ಅಲ್ಲಿನ ಪಾರ್ಲಿಮೆಂಟ್ನಲ್ಲಿ ಮಸೂದೆಯೊಂದನ್ನು ಮಂಡಿಸಲಾಗಿದ್ದು, ರಾಜಧಾನಿ ಸ್ಥಳವನ್ನು ಬದಲಾವಣೆ ಮಾಡಲು ಒಪ್ಪಿಗೆ ನೀಡಲಾಗಿದ್ದು, ಹೊಸ ರಾಜಧಾನಿಗೆ ನುಸಾಂತರಾ ಎಂದು ಹೆಸರಿಲು ಪ್ರಸ್ತಾಪಿಸಲಾಗಿದೆ. ಈ ಮಸೂದೆ ಕಾಯ್ದೆಯಾಗಿ ಬದಲಾದ ನಂತರ ಇಂಡೋನೇಷ್ಯಾದ ರಾಜಧಾನಿಯ ಪಟ್ಟಣವನ್ನು ಜಕಾರ್ತ ಕಳೆದುಕೊಳ್ಳಲಿದೆ.
ಜಕಾರ್ತ ನಗರ ಮುಳುಗಲು ಕಾರಣವೇನು?
ಇಂಡೋನೇಷ್ಯಾದ ಪ್ರಸ್ತುತ ರಾಜಧಾನಿಯಾಗಿರುವ ಜಕರ್ತಾ ಜಾವಾ ಸಮುದ್ರದ ಕರಾವಳಿಯಲ್ಲಿರುವ ನಗರವಾಗಿದೆ. ಎಲ್ಲರಿಗೂ ತಿಳಿದಿರುವಂತೆ ಹವಾಮಾನ ಬದಲಾವಣೆಯಿಂದ ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿನ ಅಗಾಧವಾದ ಮಂಜು ಹಾಗೂ ಹಿಮಾಲಯದಂತಹ ಪರ್ವತಗಳಲ್ಲಿನ ಮಂಜು ಕರಗಿ ಯಥೇಚ್ಛವಾಗಿ ಸಮುದ್ರಕ್ಕೆ ಹರಿಯುತ್ತದೆ.
ಇದರಿಂದ ಸಮುದ್ರದ ಮಟ್ಟ ಏರಿಕೆಯಾಗುತ್ತದೆ. ವಿವಿಧ ದೇಶಗಳ ಕರಾವಳಿಗಳಲ್ಲಿರುವ ನಗರಗಳು ಸಮುದ್ರದ ನೀರಿನಲ್ಲಿ ಮುಳುಗಿಹೋಗುತ್ತವೆ. ಈಗ ಜಕರ್ತಾ ನಗರ ಕೂಡಾ ದಿನೇ ದಿನೇ ಜಾವಾ ಸಮುದ್ರದ ನೀರಿಗೆ 'ಹತ್ತಿರ'ವಾಗುತ್ತಿದೆ.
ಅಂತರ್ಜಲ ಬಳಕೆ ಹೆಚ್ಚಳವೂ ಕಾರಣ : ಜಕಾರ್ತದ ಶೇಕಡಾ 65ರಷ್ಟು ಮಂದಿ ತಮ್ಮ ದಿನ ನಿತ್ಯದ ಚಟವಟಿಕೆಗಳಿಗಾಗಿ ಬೋರ್ವೆಲ್ ಮೂಲಕ ಅಂತರ್ಜಲ ಬಳಸುತ್ತಾರೆ. ಅಂತರ್ಜಲವನ್ನು ಹೆಚ್ಚಾಗಿ ಬಳಸುವ ಕಾರಣದಿಂದ ಹೆಚ್ಚು ಅಂತರ್ಜಲ ಬಳಸಿದ ಪ್ರದೇಶ ಕ್ರಮೇಣವಾಗಿ ಕುಸಿಯುತ್ತದೆ. ಸಮುದ್ರಕ್ಕೆ ಜಕಾರ್ತ ನಗರ ಹತ್ತಿರವಾಗಿರುವ ಕಾರಣದಿಂದ ಬೇಗ ಕುಸಿಯುವುದು ಮಾತ್ರವಲ್ಲದೇ, ಸಮುದ್ರದ ನೀರು ನಗರದೊಳಗೆ ಬರುವ ಸಾಧ್ಯತೆ ಇರುತ್ತದೆ.
ರಾಜಧಾನಿ ಸ್ಥಳಾಂತರಕ್ಕೆ ಇನ್ನೂ ಕೆಲವು ಕಾರಣಗಳು..
ಇಂಡೋನೇಷ್ಯಾದ ರಾಜಧಾನಿ ನಗರವನ್ನು ಬದಲಾಯಿಸಲು ಹವಾಮಾನ ಬದಲಾವಣೆ ಮಾತ್ರ ಕಾರಣವಲ್ಲ. ಸುಮಾರು 1 ಕೋಟಿಗೂ ಹೆಚ್ಚು ಮಂದಿ ಜಕರ್ತಾದಲ್ಲಿ ವಾಸ ಮಾಡುತ್ತಿದ್ದು, ಜನಸಾಂದ್ರತೆ ಹೆಚ್ಚಿದೆ. ವಾಹನಗಳ ಓಡಾಟವೂ ಹೆಚ್ಚಿದ್ದು, ಟ್ರಾಫಿಕ್ ಜಾಮ್ ಅತಿ ದೊಡ್ಡ ಸಮಸ್ಯೆಯಾಗಿದೆ.
ಸರ್ಕಾರಿ ಅಧಿಕಾರಿಯೊಬ್ಬ ಯಾವುದಾದರೂ ಕಾರಣಕ್ಕೆ ಎಲ್ಲಿಗಾದರೂ ತುರ್ತಾಗಿ ಪ್ರಯಾಣಿಸಬೇಕಿದ್ದರು, ಪೊಲೀಸ್ ಎಸ್ಕಾರ್ಟ್ ಬಳಕೆ ಮಾಡುವುದು ಅನಿವಾರ್ಯ ಎಂಬ ಪರಿಸ್ಥಿತಿ ಉಂಟಾಗಿದೆ. ಇದಲ್ಲದೇ ಹೆಚ್ಚು ಜನಸಂಖ್ಯೆ ಇರುವ ಕಾರಣಕ್ಕೆ ಮಾಲಿನ್ಯದ ಪ್ರಮಾಣವೂ ಹೆಚ್ಚಾಗಿದ್ದು, ಈ ಎಲ್ಲ ಕಾರಣಗಳಿಂದಾಗಿ ಇಂಡೋನೇಷ್ಯಾದ ರಾಜಧಾನಿಯ ಪಟ್ಟವನ್ನು ಜಕಾರ್ತಾ ಕಳೆದುಕೊಳ್ಳಲಿದೆ.
ಹೊಸ ರಾಜಧಾನಿ ಎಲ್ಲಿದೆ..?
ಇಂಡೋನೇಷ್ಯಾದ ಹೊಸ ರಾಜಧಾನಿಗೆ ನುಸಾಂತಾರಾ ಎಂದು ಹೆಸರಿಡಲಾಗಿದೆ. ನುಸಂತಾರಾ ಎಂದರೆ ದ್ವೀಪಸಮೂಹ ಎಂಬ ಅರ್ಥ ಬರುತ್ತದೆ. ಇದು ಇಂಡೋನೇಷ್ಯಾದ ಬೋರ್ನಿಯೋ ದ್ವೀಪಗಳಲ್ಲಿರುವ ಕಾಲಿಮಂಥನ್ ಎಂಬ ಪ್ರದೇಶದಲ್ಲಿ ಹೊಸ ರಾಜಧಾನಿ ತಲೆ ಎತ್ತಲಿದೆ. ಮಲೇಷ್ಯಾ ಮತ್ತು ಬ್ರೂನೈ ರಾಷ್ಟ್ರಗಳ ಗಡಿಗಳಿಗೆ ಸಮೀಪದಲ್ಲಿ ಈ ರಾಜಧಾನಿ ಬರಲಿದೆ.
32.4 ಬಿಲಿಯನ್ ಡಾಲರ್ ವೆಚ್ಚ
ರಾಜಧಾನಿ ಬದಲಾವಣೆಯಾಗಬೇಕಾದರೆ, ಇಲ್ಲಿನ ಸರ್ಕಾರಿ ಕಚೇರಿಗಳನ್ನು ಮತ್ತು ಸರ್ಕಾರಿ ವಸತಿಗಳನ್ನು ವರ್ಗಾಯಿಸಬೇಕಾಗುತ್ತದೆ. ಇದಕ್ಕಾಗಿ 466 ಟ್ರಿಲಿಯನ್ ರುಪಯ್ಯ ಅಂದರೆ 32.4 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚವಾಗಲಿದೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಅಂದಹಾಗೆ ಇಂಡೋನೇಷ್ಯಾ ಸರ್ಕಾರ ಇದೇ ಮೊದಲ ಬಾರಿಗೆ ಭಾರಿ ಮೊತ್ತದ ಮೂಲಸೌಕರ್ಯಗಳ ವರ್ಗಾವಣೆ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದೆ.
ಹವಾಮಾನ ವೈಪರಿತ್ಯ ಜಕಾರ್ತ ಮೇಲೆ ಮಾತ್ರವೇ?
ಹವಾಮಾನ ವೈಪರಿತ್ಯದಿಂದ ಪ್ರಪಂಚದ ಎಲ್ಲ ರಾಷ್ಟ್ರಗಳ ಕರಾವಳಿಗಳೂ ಹಾನಿಗೀಡಾಗಲಿವೆ. ಆದರೆ ಮುಂಚೂಣಿಯಲ್ಲಿರುವುದು ಜಕಾರ್ತ ನಗರ. ಏಷ್ಯಾದಲ್ಲಿ ನೋಡುವುದಾದರೆ, ಮನೀಲಾ, ಸಿಯೋಲ್, ಟೋಕಿಯೋ, ಹಾಂಕಾಂಗ್, ಮುಂಬೈ ಕೂಡಾ ಹವಾಮಾನ ವೈಪರೀತ್ಯದಿಂದ ಭವಿಷ್ಯದಲ್ಲಿ ಹಾನಿಗೀಡಾಗುವ ಸಾಧ್ಯತೆ ಇದೆ. ವಿಯೆಟ್ನಾಂನ ಮಿನ್ಚಿನ್ ನಗರ, ಅಮೆರಿಕದ ನ್ಯೂ ಒರ್ಲಿಯನ್ಸ್ಗಳು ಹವಾಮಾನ ಭೀತಿಯನ್ನು ಎದುರಿಸುತ್ತಿವೆ.
ಇದನ್ನೂ ಓದಿ: 12 ಸಾವಿರಕ್ಕೂ ಹೆಚ್ಚು ಮಂದಿಗೆ ಲಿಬಿಯಾದಲ್ಲಿ ಅಕ್ರಮ ಬಂಧನ: ವಿಶ್ವಸಂಸ್ಥೆ ಕಳವಳ