ಬನ್ಯುವಾಂಗಿ (ಇಂಡೊನೇಷ್ಯಾ): ಬಾಲಿ ದ್ವೀಪದಿಂದ ಬುಧವಾರ ಪ್ರಯಾಣ ಆರಂಭಿಸಿದ್ದ 'ಕೆಆರ್‌ಐ ನಂಗ್ಗಾಲಾ 402' ಎಂಬ ಹೆಸರಿನ ಜಲಾಂತರ್ಗಾಮಿಯು ನಾಪತ್ತೆಯಾಗಿತ್ತು. ಶೋಧ ಕಾರ್ಯಾಚರಣೆ ವೇಳೆ ಜಲಾಂತರ್ಗಾಮಿಗೆ ಸಂಬಂಧಿಸಿದ ಹಲವಾರು ಅವಶೇಷಗಳು ಸಿಕ್ಕಿವೆ. ಈ ಬೆನ್ನಲ್ಲೇ ಇಂಡೊನೇಷ್ಯಾ ನೌಕಾಪಡೆಯು, ಜಲಾಂತರ್ಗಾಮಿ ನೌಕೆ ಮುಳುಗಿರುವುದಾಗಿ ಘೋಷಿಸಿದೆ.
ಮೊದಲಿಗೆ ಜಲಾಂತರ್ಗಾಮಿ ನಾಪತ್ತೆಯಾಗಿದೆ ಎಂದೇ ಇಂಡೊನೇಷ್ಯಾ ಅಧಿಕಾರಿಗಳು ಪರಿಗಣಿಸಿದ್ದರು. ಆದರೆ ನಾಪತ್ತೆಯಾಗಿರುವ ಸ್ಥಳದಲ್ಲಿ ತೈಲ ಪದರ ಹಾಗೂ ಅವಶೇಷಗಳು ತೇಲುತ್ತಿರುವುದು ಕಂಡುಬಂದಿದ್ದು, ಜಲಾಂತರ್ಗಾಮಿ ಮುಳುಗಿರುವುದನ್ನು ಇವು ಸೂಚಿಸುತ್ತವೆ. ಅಲ್ಲದೇ ಶನಿವಾರದ ವೇಳೆಗೆ ಅದರಲ್ಲಿನ ಆಮ್ಲಜನಕ ಸಂಗ್ರಹ ಸಹ ಖಾಲಿಯಾಗಲಿದೆ. ಇದರಿಂದ ನೌಕೆಯು ಮುಳುಗಿರುವ ಸಾಧ್ಯತೆ ದಟ್ಟವಾಗಿದ್ದು, 53 ಮಂದಿ ಸಿಬ್ಬಂದಿ ಜಲ ಸಮಾಧಿಯಾಗಿದ್ದಾರೆ ಎಂದು ನೌಕಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಅರಬ್ಬೀ ಸಮುದ್ರದಲ್ಲಿ ಇಂದಿನಿಂದ 3 ದಿನ ಭಾರತ, ಫ್ರಾನ್ಸ್ ನೌಕೆಗಳ ಸಮರಾಭ್ಯಾಸ
ಬಾಲಿ ದ್ವೀಪದಿಂದ ಬುಧವಾರ ಪ್ರಯಾಣ ಬೆಳೆಸಿದ್ದ 'ಕೆಆರ್‌ಐ ನಂಗ್ಗಾಲಾ 402' ಜಲಾಂತರ್ಗಾಮಿಗಾಗಿ ಅಮೆರಿಕದ ವಿಮಾನ (ಪಿ-8 ಪೊಸಿಡಾನ್), ಸೋನಾರ್ ಸಾಧನಗಳನ್ನು ಅಳವಡಿಸಿರುವ ಆಸ್ಟ್ರೇಲಿಯಾದ ಯುದ್ಧನೌಕೆಗಳು, ಇಂಡೊನೇಷ್ಯಾದ 20 ಹಡಗುಗಳು ಹಾಗೂ ನಾಲ್ಕು ಯುದ್ಧವಿಮಾನಗಳು ಹುಡುಕಾಟ ನಡೆಸಿದ್ದವು.