ಫೈಸಲಾಬಾದ್ (ಪಾಕಿಸ್ತಾನ): ಪಂಜಾಬ್ ಪ್ರಾಂತ್ಯದಲ್ಲಿ ಅಪಹರಣವಾಗಿ, ಕೊಲ್ಲಲ್ಪಟ್ಟ ಕ್ರೈಸ್ತ ಸಮುದಾಯದ ಹೆಣ್ಣುಮಗುವಿನ ಸಾವಿಗೆ ನ್ಯಾಯ ಒದಗಿಸಬೇಕೆಂದು ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ ಒತ್ತಾಯಿಸಿದೆ.
ಜನವರಿ 6, ಬೆಳಗ್ಗೆ 8.30 ರ ಸುಮಾರಿಗೆ ಬಾಲಕಿ ಮನೆಯ ಹೊರಗೆ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದಾಳೆ ಎಂದು ಪೋಷಕರು ಫೈಸಲಾಬಾದ್ನ ಸದ್ದಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಾಗ ಜನವರಿ 7 ರಂದು, ನೀರಿನ ಹಳ್ಳದ ಬಳಿ ಬಾಲಕಿ ಮೃತದೇಹ ಪತ್ತೆಯಾಗಿದೆ. ಬಾಲಕಿ ಮೇಲೆ ಅತ್ಯಾಚಾರ ಪ್ರಯತ್ನಗಳು ನಡೆದಿದ್ದು, ಬಳಿಕ ಅವಳನ್ನು ಕೊಲೆ ಮಾಡಲಾಗಿದೆ ಎಂದು ವೈದ್ಯಕೀಯ ವರದಿಯಲ್ಲಿ ತಿಳಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ವಶಪಡಿಸಿಕೊಂಡ ಪೊಲೀಸರು, ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಮಾನವ ಹಕ್ಕುಗಳ ಆಯೋಗ ಅಧ್ಯಕ್ಷ ನವೀದ್ ವಾಲ್ಟರ್, ಅಲ್ಪಸಂಖ್ಯಾತ ಸಮುದಾಯಗಳ ಬಾಲಕಿಯರ ಅಪಹರಣಗಳಿಗೆ ಈ ಪ್ರಕರಣವೂ ಸೇರ್ಪಡೆಯಾಗಿದೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ದಿನಕ್ಕೆ 8 ರಿಂದ 10 ಬಾಲಕಿಯರು ನಾಪತ್ತೆಯಾಗುತ್ತಿದ್ದಾರೆ. ಅಧಿಕಾರಿಗಳು ಇಂಥ ದುರ್ಘಟನೆಗಳನ್ನು ತಡೆಗಟ್ಟಲು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.