ಹಿರೋಶಿಮಾ(ಜಪಾನ್): ಪ್ರಪಂಚದ ಮೊದಲ ಅಣುಬಾಂಬ್ ದಾಳಿ ನಡೆದು ಇಂದಿಗೆ 75 ವರ್ಷ. ಇದರ ಸ್ಮರಣಾರ್ಥವಾಗಿ ಘಟನೆಯಲ್ಲಿ ಬದುಕುಳಿದವರು, ಅವರ ಸಂಬಂಧಿಕರು ಮತ್ತು ಇತರರು ಇಂದು ಬೆಳಗ್ಗೆ 8.15ಕ್ಕೆ ಮೌನಾಚರಣೆ ಕೈಗೊಂಡರು.
1945ರ ಆ.6 ರಂದು ಬೆಳಗ್ಗೆ 8.15ಕ್ಕೆ ಜಪಾನ್ನ ಹಿರೋಶಿಮಾ ಮೇಲೆ ಅಣುಬಾಂಬ್ ದಾಳಿ ನಡೆದಿತ್ತು. ಘಟನೆಯಲ್ಲಿ ಮಕ್ಕಳು ಸೇರಿದಂತೆ ಬರೋಬ್ಬರಿ 1,40,000 ಜನರು ಮೃತಪಟ್ಟಿದ್ದರು. ಹಿರೋಶಿಮಾ ಪಾಲಿಗೆ ಇದು ಕರಾಳ ದಿನವಾಗಿದ್ದು, ಪ್ರತಿ ವರ್ಷ ಈ ದಿನದಂದು ಇದೇ ಸಮಯಕ್ಕೆ ಸರಿಯಾಗಿ ಹಿರೋಶಿಮಾ ಶಾಂತಿ ಸ್ಮಾರಕ ಉದ್ಯಾನವನದಲ್ಲಿ ಮೌನಾಚರಣೆ ಸಮಾರಂಭ ಹಮ್ಮಿಕೊಳ್ಳಲಾಗುತ್ತದೆ. ಕೋವಿಡ್ ಹಿನ್ನೆಲೆ ಈ ಬಾರಿ 1000ಕ್ಕೂ ಕಡಿಮೆ ಸಂಖ್ಯೆಯಲ್ಲಿ ಜನರು ಭಾಗವಹಿಸಲು ಅವಕಾಶ ನೀಡಲಾಗಿತ್ತು.
ಜಪಾನ್ ಪ್ರಧಾನಿ ಶಿಂಜೊ ಅಬೆ ತಮ್ಮ ಭಾಷಣದಲ್ಲಿ ನಮ್ಮ ದೇಶವು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಬಾರದು, ಉತ್ಪಾದಿಸಬಾರದು ಮತ್ತು ಅನುಮತಿಸಬಾರದು ಎಂಬ ಮೂರು ಅಣ್ವಸ್ತ್ರ ವಿರೋಧಿ ನೀತಿಯನ್ನು ಎಂದಿಗೂ ಪಾಲಿಸುತ್ತದೆ ಎಂದು ಹೇಳಿದರು.
2017 ರಲ್ಲಿ ವಿಶ್ವಸಂಸ್ಥೆಯಲ್ಲಿ 122 ರಾಷ್ಟ್ರಗಳು ಜಾಗತಿಕ ಅಣ್ವಸ್ತ್ರ ನಿಷೇಧ ಒಪ್ಪಂದಕ್ಕೆ ಸಹಿ ಹಾಕಿದ್ದವು. ಆದರೆ ಜಪಾನ್ ಇದಕ್ಕೆ ನಿರಾಕರಿಸಿತ್ತು.