ಹ್ಯೂಬೈ(ಚೀನಾ): ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಚೀನಾದಲ್ಲಿ ಮೃತಪಟ್ಟವರ ಸಂಖ್ಯೆ 908ಕ್ಕೆ ಏರಿದ್ದು, 40,000 ಕ್ಕಿಂತ ಹೆಚ್ಚು ಜನರಲ್ಲಿ ಈ ರೋಗ ಕಾಣಿಸಿಕೊಂಡಿರುವುದನ್ನು ದೃಢಪಡಿಸಲಾಗಿದೆ ಎಂದು ಚೀನಾದ ಆರೋಗ್ಯ ಅಧಿಕಾರಿಗಳು ಇಂದು ತಿಳಿಸಿದ್ದಾರೆ.
ಈ ಮಾರಣಾಂತಿಕ ಸೋಂಕಿನ ಪ್ರಕರಣದಲ್ಲಿ ಭಾನುವಾರ 97 ಜನರು ಸಾವನ್ನಪ್ಪಿದ್ದು, 3,062 ಹೊಸ ಪ್ರಕರಣಗಳು ದಾಖಲಾಗಿವೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಇನ್ನು 40,171 ಜನರಲ್ಲಿ ಈ ರೋಗ ಇರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದಲ್ಲದೆ, 296 ರೋಗಿಗಳು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು, 6,484 ರೋಗಿಗಳು ತೀವ್ರ ಅಸ್ವಸ್ಥರಾದ ಸ್ಥಿತಿಯಲ್ಲಿದ್ದಾರೆ. 23,589 ಮಂದಿ ಈ ವೈರಸ್ ಸೋಂಕಿಗೆ ಒಳಗಾಗಿದ್ದಾರೆಂದು ಶಂಕಿಸಲಾಗಿದೆ ಎಂದು ಆಯೋಗ ಹೇಳಿದೆ.
ಇನ್ನು ಈ ರೋಗಕ್ಕೆ ತುತ್ತಾದವರಲ್ಲಿ ಒಟ್ಟು 3,281 ಜನರು ಕೊಂಚ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. 1.87 ಲಕ್ಷ ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಇನ್ನೂ ವೈದ್ಯಕೀಯ ವೀಕ್ಷಣೆಯಲ್ಲಿ ಇಡಲಾಗಿದೆ.
ಭಾನುವಾರದ ಅಂತ್ಯದ ವೇಳೆಗೆ, ಮಕಾವೊದಲ್ಲಿ 10 ಮತ್ತು ತೈವಾನಿನಲ್ಲಿ 18, ಬ್ಯಾಂಕಾಕ್ ಹಾಗೂ ಕೇರಳದ ಮೂರು ಪ್ರಕರಣಗಳು ಸೇರಿದಂತೆ 300 ಕ್ಕೂ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ ಎಂದು ಆಯೋಗ ಹೇಳಿದೆ.
ಆಯೋಗದ ಪ್ರಕಾರ, ಚೀನಾದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಸತತ ಆರು ದಿನಗಳಿಂದ ಕಡಿಮೆಯಾಗುತ್ತಿದ್ದು, ಒಟ್ಟು 444 ಹೊಸ ಪ್ರಕರಣಗಳು ಹುಬೈ ಭಾಗದಲ್ಲಿ ಭಾನುವಾರ ವರದಿಯಾಗಿವೆ ಎಂದು ಡೇಟಾದಲ್ಲಿ ನಮೂದಿಸಲಾಗಿದೆ.
ಕಳೆದ ದಿನಗಳಲ್ಲಿ ಈ ಪ್ರಾಂತ್ಯಗಳಲ್ಲಿ ಹೊಸದಾಗಿ ದೃಢಪಡಿಸಿದ ಪ್ರಕರಣಗಳ ಸಂಖ್ಯೆ ಸೋಮವಾರ 890, ಮಂಗಳವಾರ 731, ಬುಧವಾರ 707, ಗುರುವಾರ 696, ಶುಕ್ರವಾರ 558 ಮತ್ತು ಶನಿವಾರ 509 ಎಂದು ಆಯೋಗ ತಿಳಿಸಿದೆ.
ಹುಬೈಯಿಂದ ವರದಿಯಾದ ಪ್ರಕರಣಗಳ ಸಂಖ್ಯೆಯಲ್ಲಿ ಸ್ಥಿರತೆ ಕಂಡುಬಂದಿದೆ ಎಂದು ಡಬ್ಲ್ಯುಹೆಚ್‌ಒ ಆರೋಗ್ಯ ತುರ್ತು ಕಾರ್ಯಕ್ರಮದ ಮುಖ್ಯಸ್ಥ ಮೈಕೆಲ್ ರಯಾನ್ ಜಿನೀವಾದಲ್ಲಿ ನಡೆದ ಬ್ರೀಫಿಂಗ್‌ನಲ್ಲಿ ತಿಳಿಸಿದ್ದಾರೆ.