ಕಂದಹಾರ್: ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತ್ಯದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದು, 40 ಮಂದಿ ಗಾಯಗೊಂಡಿದ್ದಾರೆ.
ಕಂದಹಾರ್ ಪ್ರಾಂತ್ಯದ ಮೈವಾಂಡ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಗಾಯಗೊಂಡವರಲ್ಲಿ ಸೈನಿಕರು ಮತ್ತು ನಾಗರಿಕರು ಸೇರಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕಂದಹಾರ್‌ನ ಸಾರ್ವಜನಿಕ ಆರೋಗ್ಯ ಇಲಾಖೆ ಅಧಿಕಾರಿ ಮೊಹಮ್ಮದ್ ಅಶ್ರಫ್ ನಾಡೆರಿ ಮಾಹಿತಿ ನೀಡಿದ್ದಾರೆ.
ಯಾವುದೇ ಸಂಘಟನೆ ಕೃತ್ಯದ ಹೊಣೆ ಹೊತ್ತಿಲ್ಲ, ಆದರೆ ತಾಲಿಬಾನ್ ಹಾಗೂ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರರ ಮೇಲೆ ಶಂಕೆ ವ್ಯಕ್ತವಾಗಿದೆ.
ಅಕ್ಟೋಬರ್ 5 ರಂದು ಕಾಬೂಲ್ನ ಶಿಕ್ಷಣ ಕೇಂದ್ರವೊಂದರ ಬಳಿ ಐಸಿಸ್ ಉಗ್ರರು ನಡೆಸಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 30 ಜನರು ಬಲಿಯಾಗಿದ್ದು, 70 ಮಂದಿ ಗಾಯಗೊಂಡಿದ್ದರು. ನವೆಂಬರ್ 2 ರಂದು ಪಕ್ತಿಯಾ ಪ್ರಾಂತ್ಯದಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ ಸುಮಾರು 15 ಮಂದಿ ಸಾವನ್ನಪ್ಪಿದ್ದರು.