ಇಸ್ಲಾಮಾಬಾದ್: ಜುಲೈ 22 ರಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವಾಷಿಂಗ್ಟನ್‌ನಲ್ಲಿ ಭೇಟಿಯಾಗಲಿದ್ದಾರೆ.
ಉಭಯ ದೇಶಗಳ ನಡುವಿನ ಸಂಬಂಧವನ್ನು ಸುಧಾರಿಸುವ ಬಗ್ಗೆ ಮಾತುಕತೆ ನಡೆಸಲಾಗುವುದು ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ಗುರುವಾರ ತಿಳಿಸಿದ್ದು. ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಆಹ್ವಾನದ ಮೇರೆಗೆ ಇಮ್ರಾನ್ ಖಾನ್ ವಾಷಿಂಗ್ಟನ್‌ಗೆ ಭೇಟಿ ನೀಡಲಿದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ವಕ್ತಾರ ಡಾ.ಮೊಹಮ್ಮದ್ ಫೈಸಲ್ ಹೇಳಿದ್ದಾರೆ.
ಎರಡು ದಿನಗಳ ಹಿಂದೆ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್, ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಅನ್ನು ಜಾಗತಿಕ ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಿತು. ಹಾಗೂ ಅದಾದ ಒಂದು ದಿನದ ನಂತರ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಇಲಾಖೆಯು ಹಫೀಜ್ ಸಯೀದ್ ವಿರುದ್ಧ ಭಯೋತ್ಪಾದಕ ಹಣಕಾಸು ಪ್ರಕರಣವನ್ನು ದಾಖಲಿಸಿದೆ.