ಕಾಬೂಲ್: ಅಫ್ಘಾನಿಸ್ತಾನದ ಪ್ರತಿಸ್ಪರ್ಧಿ ನಾಯಕರಿಬ್ಬರು ಇಂದು ಪ್ರತ್ಯೇಕ ಸಮಾರಂಭಗಳಲ್ಲಿ ಏಕಕಾಲಕ್ಕೆ ಅಫ್ಘನ್ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿ ಪ್ರಜೆಗಳಲ್ಲಿ ಗೊಂದಲವುಂಟು ಮಾಡಿ, ರಾಜಕೀಯ ಬಿಕ್ಕಟ್ಟಿಗೆ ಸಿಲುಕಿಸಿದೆ.
ಅಪಘಾನಿಸ್ತಾನದಲ್ಲಿ ಕಳೆದ ಎರಡು ದಶಕಗಳಿಂದ ನಡೆಯುತ್ತಿರುವ ಸಮರಕ್ಕೆ ಪೂರ್ಣ ವಿರಾಮವಿಟ್ಟು, ಶಾಶ್ವತವಾಗಿ ಶಾಂತಿ ನೆಲೆಸುವಂತೆ ಮಾಡುವ ತಾಲಿಬಾನ್ ಮತ್ತು ಅಮೆರಿಕ ದೇಶದ ನಡುವಿನ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಫೆ.29 ರಂದು ಸಹಿ ಹಾಕಲಾಗಿತ್ತು. ಎರಡು ದೇಶಗಳ ನಡುವಿನ ಸಮಸ್ಯೆ ಬಗೆಹರಿದಿದ್ದರೂ ಕಳೆದ ಸೆಪ್ಟೆಂಬರ್ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಅಶ್ರಫ್ ಘನಿ ಹಾಗೂ ಮತಗಳಲ್ಲಿ ವಂಚನೆ ಎಸಗಿರುವ ಆರೋಪ ಹೊತ್ತಿದ್ದ ಅವರ ಪ್ರತಿಸ್ಪರ್ಧಿ ಅಬ್ದುಲ್ಲಾ ಅಬ್ದುಲ್ಲಾ ನಡುವಿನ ಪೈಪೋಟಿ ಮಾತ್ರ ಅಂತ್ಯವಾಗಿಲ್ಲ.
ಇಂದು ಏಕಕಾಲದಲ್ಲಿ ಪ್ರತ್ಯೇಕ ಸಮಾರಂಭಗಳು ನಡೆದಿದ್ದು, ಇತ್ತ ಅಧ್ಯಕ್ಷೀಯ ಅರಮನೆಯಲ್ಲಿ ಅಶ್ರಫ್ ಘನಿ, ಅತ್ತ ಸಪೇದಾರ್ ಅರಮನೆಯಲ್ಲಿ ಅಬ್ದುಲ್ಲಾ ಅಬ್ದುಲ್ಲಾ ಅವರು ಅಫ್ಘಾನಿಸ್ತಾನದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಇವರ ಈ ನಡೆ ದೇಶವನ್ನು ಹೊಸ ರಾಜಕೀಯ ಬಿಕ್ಕಟ್ಟಿಗೆ ಸಿಲುಕಿಸಿದ್ದಲ್ಲದೇ, ತಾಲಿಬಾನ್ ಜೊತೆಗಿನ ಶಾಂತಿ ಒಪ್ಪಂದವನ್ನು ಹೇಗೆ ಮುಂದಕ್ಕೆ ಸಾಗಿಸಬೇಕೆಂಬ ಲೆಕ್ಕಾಚಾರದಲ್ಲಿದ್ದ ಅಮೆರಿಕಾಗೆ ಸಂದಿಗ್ಧ ಪರಿಸ್ಥಿತಿಯನ್ನ ಉಂಟುಮಾಡಿದೆ.