ರಾಮಲ್ಲಾಹ್ (ಪ್ಯಾಲೆಸ್ತೀನ್): ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನಡುವೆ ಮತ್ತೆ ಸಂಘರ್ಷ ಆರಂಭವಾಗಿದೆ. ಪ್ಯಾಲೆಸ್ತೀನ್‌ನ ವೆಸ್ಟ್ ಬ್ಯಾಂಕ್ ನಗರ ಮತ್ತು ಸಮೀಪದ ಗ್ರಾಮಗಳ ಜನರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಇಸ್ರೇಲ್ ಸೈನಿಕರೊಂದಿಗೆ ಘರ್ಷಣೆ ನಡೆದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬೀಟಾ ಗ್ರಾಮದಲ್ಲಿ ಇಸ್ರೇಲ್ ಸೈನಿಕರು ರಬ್ಬರ್ ಬುಲೆಟ್ ಹಾಗೂ ಅಶ್ರುವಾಯು ದಾಳಿ ನಡೆಸಿದ್ದು, ಇದರಿಂದ 31 ಮಂದಿ ಉಸಿರುಗಟ್ಟಿ ಅಸ್ವಸ್ಥರಾಗಿದ್ದಾರೆ. ಗಾಯಗೊಂಡಿದ್ದ 33 ಮಂದಿಗೆ ನಮ್ಮ ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ ಎಂದು ಪ್ಯಾಲೆಸ್ತೀನ್‌ನ ರೆಡ್ ಕ್ರೆಸೆಂಟ್ ಸೊಸೈಟಿ ಹೇಳಿದೆ.
ಕಲ್ಕಿಲ್ಯಾ ಪಟ್ಟಣದಲ್ಲಿ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿ ಅಶ್ರುವಾಯು ಪ್ರಯೋಗಿಸಲಾಗಿದೆ. 8 ಮಂದಿ ಗಾಯಗೊಂಡಿದ್ದು, 12ಕ್ಕೂ ಹೆಚ್ಚು ಮಂದಿಗೆ ಉಸಿರುಗಟ್ಟಿದೆ ಎಂದು ಪ್ರತಿಭಟನೆ ಆಯೋಜಕ ಮುರಾದ್ ಇಸ್ತೈವಿ ತಿಳಿಸಿದ್ದಾರೆ.
ಇದನ್ನೂ ಓದಿ: ಗಾಜಾ ಮೇಲೆ ಮತ್ತೆ ದಾಳಿ ಆರಂಭಿಸಿದ ಇಸ್ರೇಲ್: ನೆಪ ಮಾತ್ರಕ್ಕೆ ಕದನ ವಿರಾಮ?
ಕಳೆದ ಮೇನಲ್ಲಿ ಜೆರುಸಲೇಂನ ಅಲ್-ಅಕ್ಸಾ ಮಸೀದಿ ವಿಚಾರದಲ್ಲಿ ಉಭಯ ರಾಷ್ಟ್ರಗಳ ನಡುವೆ ಉಂಟಾಗಿದ್ದ ಯುದ್ಧದಲ್ಲಿ 250ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸಾವಿರಾರು ಜನರು ಗಾಯಗೊಂಡಿದ್ದರು. ಸತತ 11 ದಿನಗಳ ಯುದ್ಧದ ಬಳಿಕ ಕದನ ವಿರಾಮ ಘೋಷಿಸಿಕೊಂಡಿದ್ದವು. ಆನಂತರ ಪ್ಯಾಲೆಸ್ತೀನ್ಗೆ ಸೇರಿದ ಪ್ರದೇಶವನ್ನು ಇಸ್ರೇಲ್ ವಶಪಡಿಸಿಕೊಳ್ಳುವುದನ್ನು ವಿರೋಧಿಸಿ ಪ್ರತಿ ಶುಕ್ರವಾರ ಅಲ್ಲಿನ ಜನರು ರ‍್ಯಾಲಿ ಮತ್ತು ಪ್ರತಿಭಟನೆಗಳನ್ನು ನಡೆಸುತ್ತಾ ಬಂದಿದ್ದು, ನಿನ್ನೆಯೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.