ಇಸ್ಲಾಮಾಬಾದ್ : ಲಂಡನ್ನಿಂದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಗಡಿಪಾರು ಮಾಡುವಂತೆ ಪಾಕಿಸ್ತಾನ ಸರ್ಕಾರ ಇಂಗ್ಲೆಂಡ್ ಸರ್ಕಾರಕ್ಕೆ ಒತ್ತಡ ಹೇರುತ್ತಿದ್ದು, ಮತ್ತೆ ಮೂರನೇ ಬಾರಿಗೆ ಮನವಿ ಸಲ್ಲಿಸಿದೆ.
ಪಾಕಿಸ್ತಾನ ಮುಸ್ಲಿಂ ಲೀಗ್ನ ನಾಯಕ 70 ವರ್ಷದ ನವಾಜ್ ಷರೀಫ್ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಶಿಕ್ಷೆಗೆ ಒಳಗಾಗಿದ್ದು, 2017ರ ಅಧಿಕಾರದಿಂದ ಕೆಳಗಿಳಿದಿದ್ದರು. ಇದಾದ ನಂತರ ಚಿಕಿತ್ಸೆಗೆ ಲಂಡನ್ಗೆ ತೆರಳಿದ ಅವರು ವಾಪಸ್ಸಾಗದ ಅಲ್ಲಿಯೇ ಉಳಿದುಕೊಂಡಿದ್ದರು.
ಈಗ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸುವಂತೆ ಇಂಗ್ಲೆಂಡ್ಗೆ ಪಾಕಿಸ್ತಾನ ಮನವಿ ಮಾಡುತ್ತಿದೆ. ಬ್ರಿಟಿಷ್ ಹೈಕಮೀಷನರ್ಗೆ ಮೂರು ವಾರಗಳ ಹಿಂದೆಯೇ ಪತ್ರ ಬರೆಯಲಾಗಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಪತ್ರದ ಮೂಲಕ ಪಾಕಿಸ್ತಾನ ಸರ್ಕಾರ ಷರೀಫ್ ಅವರ ವೀಸಾವನ್ನು ರದ್ದುಗೊಳಿಸುವ ಬಗ್ಗೆ ಪರಿಗಣಿಸುವಂತೆ ಬ್ರಿಟಿಷ್ ಅಧಿಕಾರಿಗಳನ್ನು ಕೇಳಿದೆ. ಈಗಿರುವ ವೀಸಾ ನವೆಂಬರ್‌ನಿಂದ ವೈದ್ಯಕೀಯ ಆಧಾರದ ಮೇಲೆ ಲಂಡನ್‌ನಲ್ಲಿ ವಾಸಿಸಲು ಅವಕಾಶ ಮಾಡಿಕೊಟ್ಟಿದೆ.
1974ರ ಬ್ರಿಟನ್ ವಲಸೆ ಕಾನೂನನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ಇದರ ಪ್ರಕಾರ ನಾಲ್ಕು ವರ್ಷಗಳಿಗಿಂತ ಹೆಚ್ಚು ಶಿಕ್ಷೆಗೆ ಒಳಪಟ್ಟಿರುವ ವ್ಯಕ್ತಿಯನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಈ ಕಾನೂನಿನಲ್ಲಿ ಉಲ್ಲೇಖಿಸಲಾಗಿದೆ.