ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಕ್ರಿಕೆಟ್ ಸರಣಿ ಆಡುವುದರಿಂದ ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ತಂಡಗಳು ಹಿಂದೆ ಸರಿದಿರುವುದು ದುರದೃಷ್ಟಕರ. ಪಾಕಿಸ್ತಾನದಲ್ಲಿ ಅಮೆರಿಕದ ಸೇನೆಗಳಿಗೆ ನೆಲೆ ಸ್ಥಾಪಿಸುವ ಮನವಿ ನಿರಾಕರಿಸಿದ್ದಕ್ಕೆ ಈ ಪ್ರತಿಫಲ ದೊರಕಿದೆ ಎಂದು ಪಾಕ್ ಮಾಹಿತಿ ಸಚಿವ ಫವಾದ್ ಚೌಧರಿ ವ್ಯಂಗ್ಯವಾಗಿ ನುಡಿದಿದ್ದಾರೆ.
ಕಳೆದ ಶುಕ್ರವಾರವಾರದಂದು ನ್ಯೂಜಿಲ್ಯಾಂಡ್ ತಂಡವು ಪಾಕಿಸ್ತಾನದಲ್ಲಿ ಸರಣಿ ಆರಂಭವಾಗುವ ಮುನ್ನವೇ ಜೀವ ಬೆದರಿಕೆ ಇದೆ ಎಂಬ ಕಾರಣವೊಡ್ಡಿ ಹಿಂದೆ ಸರಿದಿತ್ತು. ಮುಂದಿನ ತಿಂಗಳು ಪಾಕಿಸ್ತಾನದಲ್ಲಿ ನಡೆಯಲಿದ್ದ ಸರಣಿಯಿಂದ ಇಂಗ್ಲೆಂಡ್ ಕೂಡ ಹಿಂದೆ ಸರಿದಿರುವುದನ್ನು ಸೋಮವಾರ ದೃಢಪಡಿಸಿದೆ.
2009ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಬಸ್ ಮೇಲೆ ಭಯೋತ್ಪಾದಕರ ದಾಳಿ ನಡೆದ ನಂತರ ಅಂತಾರಾಷ್ಟ್ರೀಯ ತಂಡಗಳು ಇಲ್ಲಿಗೆ ಆಗಮಿಸಲು ಹಿಂದೇಟು ಹಾಕುತ್ತಿವೆ.
ಆದರೆ, ಕಳೆದ ಕೆಲ ವರ್ಷಗಳಿಂದ ಜಿಂಬಾಬ್ವೆ, ದಕ್ಷಿಣ ಆಫ್ರಿಕಾ ಇಲ್ಲಿಗೆ ಪ್ರವಾಸ ಕೈಗೊಂಡು ಕ್ರಿಕೆಟ್ ಆಡಿವೆ. ನ್ಯೂಜಿಲ್ಯಾಂಡ್ ಕೂಡ ಪ್ರವಾಸ ಕೈಗೊಂಡಿತ್ತು. ಆದರೆ, ಅಲ್ಲಿಗೆ ತೆರಳಿದ ಮೇಲೆ ಬೆದರಿಕೆ ಬಂದ ಕಾರಣ ತವರಿಗೆ ವಾಪಸ್ ಆಗಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ಕೂಡ ಇದೇ ನಿರ್ಧಾರ ಕೈಗೊಂಡಿದೆ.
ಪಾಕ್ ಸಚಿವ ಫವಾದ್ ಚೌಧರಿ ಅಸಮಾಧಾನ
ಇನ್ನು ಈ ಬಗ್ಗೆ ಮಾತನಾಡಿದ ಫವಾದ್ ಚೌಧರಿ,"ಪ್ರಧಾನಿ ಇಮ್ರಾನ್ ಖಾನ್ ಜೊತೆಗೆ ಸಭೆ ನಡೆಸಲಾಗಿದೆ. ಈ ಹಿಂದೆ ಅಮೆರಿಕವು ತನ್ನ ಸೇನಾ ನೆಲೆಗಳನ್ನು ಪಾಕ್‌ನಲ್ಲಿ ಸ್ಥಾಪಿಸಲು ಕೋರಿತ್ತು. ಆದರೆ ಅದನ್ನು ನಮ್ಮ ಸರ್ಕಾರ ನಿರಾಕರಿಸಿತ್ತು. ಇದೀಗ ಅದರ ಬೆಲೆ ತೆರಬೇಕಾಗಿದೆ’ ಎಂದರು.
ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ತಂಡಗಳ ನಿರ್ಧಾರದಿಂದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಅಪಾರ ಪ್ರಮಾಣದ ಆದಾಯ ನಷ್ಟವಾಗಿದೆ. ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಅಲ್ಲಿನ ಕ್ರಿಕೆಟ್ ಸಮುದಾಯ ಹೇಳಿದೆ.