ಹಾಂಗ್ಕಾಂಗ್: ಪೂರ್ವ ಚೀನಾ ಸಮುದ್ರದಲ್ಲಿರುವ ಸೆಂಕಾಕು ಅಥವಾ ಡಿಯಾಯು ದ್ವೀಪಗಳ ವಿಷಯದಲ್ಲಿ ಚೀನಾ ಹಾಗೂ ಜಪಾನ್ ಮಧ್ಯೆ ಭುಗಿಲೆದ್ದಿರುವ ವಿವಾದವು ಮುಂದಿನ ಅನೇಕ ವರ್ಷಗಳ ಕಾಲ ಏಶಿಯಾದಲ್ಲಿ ರಾಜಕೀಯ ತಲ್ಲಣವನ್ನುಂಟು ಮಾಡಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ದ್ವೀಪಗಳು ಸೇರಿದಂತೆ ಚೀನಾ ಒಟ್ಟು 14 ರಾಷ್ಟ್ರಗಳೊಂದಿಗೆ ಗಡಿ ಹಂಚಿಕೊಂಡಿದ್ದು, ಬಹುತೇಕ ಈ ಎಲ್ಲ ರಾಷ್ಟ್ರಗಳೊಂದಿಗೂ ಅದು ಒಂದಿಲ್ಲೊಂದು ಕಾರಣಕ್ಕೆ ದ್ವೇಷ ಕಟ್ಟಿಕೊಂಡಿದೆ. ಜಪಾನ್ನ ಟೋಕಿಯೋದ ನೈಋತ್ಯ ದಿಕ್ಕಿನಲ್ಲಿರುವ 1,900 ಕಿಮೀ ದ್ವೀಪ ಸರಣಿಗಳ ವಿಷಯದಲ್ಲಿ ಕಳೆದ ಹಲವಾರು ವರ್ಷಗಳಿಂದಲೂ ವಿವಾದ ನಡೆದೇ ಇದೆ. ಹಿಂದಿನ ನೂರಾರು ವರ್ಷಗಳಿಂದಲೂ ಇವುಗಳ ಮೇಲೆ ತಮ್ಮ ಅಧಿಕಾರವಿದೆ ಎಂದು ಪ್ರತಿಪಾದಿಸುತ್ತಿರುವ ಎರಡೂ ರಾಷ್ಟ್ರಗಳು ತಮ್ಮ ನಿಲುವಿನಿಂದ ಹಿಂದೆ ಸರಿಯುವ ಲಕ್ಷಣಗಳಿಲ್ಲ. ಜೊತೆಗೆ ಈ ದ್ವೀಪಗಳ ವಿಷಯ ಎರಡೂ ರಾಷ್ಟ್ರಗಳ ಜನತೆಗೆ ರಾಷ್ಟ್ರಾಭಿಮಾನದ ವಿಷಯವಾಗಿ ಬಿಟ್ಟಿದೆ.
ಸೆಂಕಾಕುಸ್ ಎಂದು ಜಪಾನ್ನಲ್ಲಿ ಹಾಗೂ ಡಿಯಾಯುಸ್ ಎಂದು ಚೀನಾದಲ್ಲಿ ಕರೆಯಲ್ಪಡುವ ಜನವಸತಿ ಇಲ್ಲದ ಈ ದ್ವೀಪಗಳು ತನಗೆ ಸೇರಿವೆ ಎಂದು ಎರಡೂ ರಾಷ್ಟ್ರಗಳು ಹಕ್ಕು ಮಂಡಿಸುತ್ತಿವೆ. ಆದರೆ 1972 ರಿಂದಲೂ ಈ ದ್ವೀಪಗಳ ಒಡೆತನ ಟೋಕಿಯೊ ಬಳಿಯಿದೆ ಎಂಬುದು ಗಮನಾರ್ಹ.
ಈಗ ಏಪ್ರಿಲ್ ತಿಂಗಳ ಮಧ್ಯಭಾಗದಿಂದ ಇತ್ತೀಚಿನವರೆಗೆ ಈ ದ್ವೀಪಗಳ ಬಳಿ ಚೀನಾದ 67 ಹಡಗುಗಳು ಕಾಣಿಸಿಕೊಂಡಿವೆ ಎಂದು ಜಪಾನ್ ಹೇಳಿದೆ. ಒಂದು ವೇಳೆ ಜಪಾನ್ ಏನಾದರೂ ಚೀನಾ ವಿರುದ್ಧ ಮಿಲಿಟರಿ ಪ್ರತಿಕ್ರಿಯೆ ನೀಡಿದಲ್ಲಿ, ಅಮೆರಿಕ ಸಹ ಅನಿವಾರ್ಯವಾಗಿ ಮಧ್ಯ ಪ್ರವೇಶಿಸಬೇಕಾಗುತ್ತದೆ. ಜಪಾನ್ ಹಾಗೂ ಅಮೆರಿಕಗಳ ದ್ವಿಪಕ್ಷೀಯ ಒಪ್ಪಂದದ ಪ್ರಕಾರ, ಯಾವುದೇ ರಾಷ್ಟ್ರ ಜಪಾನ್ ನೆಲದ ಮೇಲೆ ದಾಳಿ ಮಾಡಿದರೆ ಅಮೆರಿಕ ಜಪಾನ್ ರಕ್ಷಣೆಗೆ ನಿಲ್ಲಬೇಕಾಗುತ್ತದೆ.
"ಸೆಂಕಾಕು ದ್ವೀಪಗಳು ನಮ್ಮ ನಿಯಂತ್ರಣದಲ್ಲಿವೆ. ಐತಿಹಾಸಿಕವಾಗಿ ಹಾಗೂ ಪ್ರಸ್ತುತ ಜಾರಿಯಲ್ಲಿರುವ ಅಂತಾರಾಷ್ಟ್ರೀಯ ಕಾನೂನುಗಳ ಪ್ರಕಾರ ಅವು ನಮಗೆ ಸೇರಿವೆ. ಮತ್ತೆ ಇಂಥ ಚೀನಾ ಕಾರ್ಯಚಟುವಟಿಕೆಗಳು ಮುಂದುವರೆದಲ್ಲಿ ಪರಿಸ್ಥಿತಿ ತೀರಾ ಗಂಭೀರವಾಗಲಿದೆ. ಚೀನಾ ದುರಾಕ್ರಮಣಕ್ಕೆ ನಾವು ಸೂಕ್ತ ಹಾಗೂ ಸಮರ್ಥ ಉತ್ತರ ನೀಡಬೇಕಾಗುತ್ತದೆ." ಎಂದು ಜಪಾನ್ನ ಮುಖ್ಯ ಕ್ಯಾಬಿನೆಟ್ ಸೆಕ್ರೆಟರಿ ಯೋಶಿಹಿಡೆ ಸುಗಾ ಎಚ್ಚರಿಕೆ ನೀಡಿದ್ದಾರೆ.
"ಡಿಯಾಯು ದ್ವೀಪಗಳು ಚೀನಾದ ಅವಿಭಾಜ್ಯ ಅಂಗಗಳಾಗಿವೆ. ಹೀಗಾಗಿ ಅವುಗಳ ಮೇಲೆ ಪ್ರಭುತ್ವ ಸಾಧಿಸುವುದು ಹಾಗೂ ಅವನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದೆ." ಎಂದು ಚೀನಾ ವಿದೇಶಾಂಗ ಇಲಾಖೆ ಖಾರವಾಗಿ ಪ್ರತಿಕ್ರಿಯಿಸಿದೆ.
ಈ ದ್ವೀಪಗಳ ಒಡೆತನದ ವಿವಾದ ಈಗಲೇ ಮುಗಿಯಲಾರದು ಹಾಗೂ ಈ ವಿವಾದ ಬಹುದೊಡ್ಡ ಮಟ್ಟದ ರಾಜಕೀಯ ಹಾಗೂ ಮಿಲಿಟರಿ ಸಂಘರ್ಷಕ್ಕೆ ಕಾರಣವಾಗುವ ಎಲ್ಲ ಸಾಧ್ಯತೆಗಳಿವೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.