ಸಿಂಧ್ (ಪಾಕಿಸ್ತಾನ): ನಿನ್ನೆ ಬೆಳಗ್ಗೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದ ರೈಲುಗಳ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 51ಕ್ಕೆ ಏರಿಕೆಯಾಗಿದ್ದು, ಸುಮಾರು 100 ಮಂದಿ ಗಾಯಗೊಂಡಿದ್ದಾರೆ.
ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯ ಧಾರ್ಕಿ ನಗರದ ಬಳಿ ಎರಡು ಪ್ರಯಾಣಿಕರ ರೈಲುಗಳು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಹಲವು ಮಂದಿ ಸಾವನ್ನಪ್ಪಿದ್ದರು. ಬೋಗಿಗಳ ಅಡಿಯಲ್ಲಿ ಹಲವಾರು ಜನರು ಸಿಲುಕಿದ್ದು, ಪೊಲೀಸರು, ಪಾಕ್ ಸೇನೆ ಹಾಗೂ ಅರೆಸೇನೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದವು.
ನಿನ್ನೆ 30ಕ್ಕೂ ಅಧಿಕ ಮಂದಿ ಮೃತಪಟ್ಟಿರುವುದು ದೃಢಪಟ್ಟಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಸಾವಿನ ಸಂಖ್ಯೆ 51ಕ್ಕೆ ಏರಿಕೆಯಾಗಿದ್ದು, ನೂರು ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾಹೋರ್‌ನಿಂದ ಕರಾಚಿಗೆ ಹೋಗುತ್ತಿದ್ದ ಸರ್ ಸೈಯದ್ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿ ಸರ್ಗೋಧಾದಿಂ ಹೊರಟಿದ್ದ ಮಿಲ್ಲಾಟ್ ಎಕ್ಸ್‌ಪ್ರೆಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ಮಿಲ್ಲಾಟ್ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳು ಪಲ್ಟಿಯಾಗಿದ್ದವು. 13ರಿಂದ 14 ಬೋಗಿಗಳು ಹಳಿ ತಪ್ಪಿದ್ದು, ಈ ಪೈಕಿ 6ರಿಂದ 8 ಬೋಗಿಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ಘೋಟ್ಕಿ ಜಿಲ್ಲಾಧಿಕಾರಿ ಉಸ್ಮಾನ್ ಅಬ್ದುಲ್ಲಾ ತಿಳಿಸಿದ್ದಾರೆ.