ಬ್ಯಾಂಕಾಕ್: ಥಾಯ್ಲೆಂಡ್ನಲ್ಲಿ ರಜೆಗೆಂದು ತೆರಳಿ ಹೃದಯಾಘಾತದಿಂದ ಸಾವನ್ನಪ್ಪಿದ ಆಸ್ಟ್ರೇಲಿಯಾದ ಕ್ರಿಕೆಟ್ ದಂತಕತೆ ಶೇನ್ ವಾರ್ನ್ ಅವರ ಪಾರ್ಥಿವ ಶರೀರ ತವರು ತಲುಪಲಿದ್ದು, ಅಂತಿಮ ಯಾತ್ರೆ ಆರಂಭಿಸಿದೆ.
ಇಂದು ಮುಂಜಾನೆಗೂ ಮೊದಲು, ಆಸ್ಟ್ರೇಲಿಯನ್ ಧ್ವಜದಲ್ಲಿ ಹೊದಿಸಿದ ಅವರ ಶವಪೆಟ್ಟಿಗೆಯನ್ನು ಥಾಯ್ ಪೊಲೀಸ್ ಫೋರೆನ್ಸಿಕ್ ಇನ್‌ಸ್ಟಿಟ್ಯೂಟ್‌ನಲ್ಲಿ ಆಂಬ್ಯುಲೆನ್ಸ್‌ನಲ್ಲಿ ಇಡಲಾಯಿತು. ನಂತರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಯಿತು. ಖಾಸಗಿ ಜೆಟ್ ವಿಮಾನವು ಶೇನ್ ವಾರ್ನ್ ಅವರ ಮೃತದೇಹವನ್ನು ಅವರ ಹುಟ್ಟೂರಾದ ಮೆಲ್ಬೋರ್ನ್‌ಗೆ ಹಿಂತಿರುಗಿಸುವ ನಿರೀಕ್ಷೆಯಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.
ಸಾರ್ವಕಾಲಿಕ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಶೇನ್ ವಾರ್ನ್, ಥಾಯ್ಲೆಂಡ್‌ನ ದಕ್ಷಿಣದಲ್ಲಿರುವ ಸಮುಯಿ ದ್ವೀಪದಲ್ಲಿ ಸ್ನೇಹಿತರೊಂದಿಗೆ ವಿಹಾರ ಮಾಡುತ್ತಿದ್ದಾಗ ಕಳೆದ ಶುಕ್ರವಾರದಂದು ನಿಧನರಾಗಿದ್ದರು. ಮರಣೋತ್ತರ ಪರೀಕ್ಷೆಯ ಪ್ರಕಾರ ಅವರದ್ದು ಸಹಜ ಸಾವು ಎಂದು ವರದಿಯಾಗಿದೆ.
ಇದನ್ನೂ ಓದಿ: ಕ್ರಿಕೆಟ್ ದಂತಕತೆ ಶೇನ್ ವಾರ್ನ್ಗೆ ಮಾ.30ರಂದು ಎಂಸಿಜಿಯಲ್ಲಿ ಸ್ಮರಣಾ ಕಾರ್ಯಕ್ರಮ
ಶೇನ್ ವಾರ್ನ್ ಅವರ ಕುಟುಂಬವು ಸೋಮವಾರ ತಡರಾತ್ರಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿತ್ತು. ಮಾರ್ಚ್ 4 ರ ಅವರ ಸಾವಿನ ರಾತ್ರಿಯನ್ನು ಎಂದಿಗೂ ಅಂತ್ಯವಿಲ್ಲದ ದುಃಸ್ವಪ್ನದ ಆರಂಭ ಎಂದು ವಿವರಿಸಿದೆ. ಇನ್ನು, ಶೇನ್ ವಾರ್ನ್ ಅವರ ಸ್ಮರಣಾ ಕಾರ್ಯಕ್ರಮವನ್ನು ವಿಕ್ಟೋರಿಯಾ ರಾಜ್ಯ ಆಯೋಜಿಸಲಿದ್ದು, ಮಾರ್ಚ್ 30ರಂದು ಕಾರ್ಯಕ್ರಮ ನಡೆಯಲಿದೆ.