ಬೀಜಿಂಗ್: ಕೊರೊನಾ ವೈರಸ್ ತಗುಲಿದ ಗರ್ಭಿಣಿಯರಿಂದ ನವಜಾತ ಶಿಶುಗಳಿಗೆ ಈ ಸೋಂಕು ಹರಡುವುದಿಲ್ಲ ಎಂದು ಅಧ್ಯಯನವೊಂದು ತಿಳಿಸಿದೆ.
ಗರ್ಭವತಿಯಾಗಿದ್ದಾಗ ಕೊವಿಡ್ -19 ಕಾಯಿಲೆಗೆ ಗುರಿಯಾದ ತಾಯಂದಿರಿಂದ ಮಕ್ಕಳಿಗೆ ವೈರಸ್ ಹರಡುತ್ತದೆಯೇ? ಎಂದು ಖಚಿತಪಡಿಸಲು ಅಧ್ಯಯನ ನಡೆಸಲಾಗಿದೆ. ಹೀಗೆ ನಡೆಸಿದ ಅಧ್ಯಯನಗಳ ಪೈಕಿ ಇದು ಎರಡನೆಯ ಅಧ್ಯಯನವಾಗಿದೆ ಎಂದು ಹುವಾಜಾಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ.
ವುಹಾನ್ ಯೂನಿಯನ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಗುರಿಯಾದ ನಾಲ್ವರು ಗರ್ಭಿಣಿಯರು ಮಗುವಿಗೆ ಜನ್ಮ ನೀಡಿದ್ದರು. ಶಿಶುಗಳ ಆರೋಗ್ಯ ತಪಾಸಣೆ ನಡೆಸಿದಾಗ ಕೊವಿಡ್-19ಗೆ ಸಂಬಂಧಿಸಿದ ಜ್ವರ ಅಥವಾ ಕೆಮ್ಮಿನಂತಹ ಯಾವುದೇ ಗಂಭೀರ ರೋಗಲಕ್ಷಣಗಳು ಕೂಡ ಕಂಡುಬಂದಿಲ್ಲ. ಆದರೂ ಎಲ್ಲ ನವಜಾತ ಶಿಶುಗಳನ್ನು ತೀವ್ರ ನಿಗಾ ಘಟಕಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ನಾಲ್ವರ ಪೈಕಿ ಮೂರು ಶಿಶುಗಳಿಗೆ ಉಸಿರಾಟದ ಸೋಂಕಿಗೆ ಸಂಬಂಧಿಸಿದ ಪರೀಕ್ಷೆ ನಡೆಸಲಾಯಿತು. ಓರ್ವ ತಾಯಿ ಈ ಪರೀಕ್ಷೆ ನಡೆಸಲು ಅನುಮತಿ ನೀಡಲಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ. ಒಂದು ನವಜಾತ ಶಿಶುವಿಗೆ ಮೂರು ದಿನಗಳವರೆಗೆ ಸಣ್ಣ ಉಸಿರಾಟದ ಸಮಸ್ಯೆ ಕಂಡುಬಂದಿತ್ತು, ಆದರೆ ಸಣ್ಣ ಚಿಕಿತ್ಸೆಯಿಂದ ಗುಣಪಡಿಸಲಾಗಿದೆ ಎಂದು ಮಾಹಿತಿ ನಿಡಿದ್ದಾರೆ.