ಬೀಜಿಂಗ್: ಮಹಾಮಾರಿ ಕೊರೊನಾ ವೈರಸ್ಗೆ ಚೀನಾದಲ್ಲಿ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇದೀಗ ಸಾವನ್ನಪ್ಪಿದವರ ಸಂಖ್ಯೆ 425ಕ್ಕೆ ತಲುಪಿದೆ. ಸರಿಸುಮಾರು 20 ಸಾವಿರ ಮಂದಿಯಲ್ಲಿ ಸೋಂಕು ಕಂಡು ಬಂದಿದೆ ಎಂದು ವರದಿಯಾಗಿದೆ.
ಒಂದೇ ದಿನದಲ್ಲಿ ಮಹಾಮಾರಿಗೆ 64 ಜನರು ಮೃತಪಟ್ಟಿದ್ದು, ಇದೀಗ ಮಹಾಮಾರಿ ವಿರುದ್ಧ ಹೋರಾಡಲು ಅಮೆರಿಕದ ಸಹಾಯ ಕೇಳಿದೆ. ಕೊರೊನಾಗೆ ಒಳಗಾದವರಿಗಾಗಿ ಚಿಕಿತ್ಸೆ ನೀಡಲು ಕೇವಲ 10 ದಿನದಲ್ಲಿ ಆಸ್ಪತ್ರೆ ಸಹ ತೆರೆಯಲಾಗಿದ್ದು, ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ.
ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ವಿಶ್ವ ಆರೋಗ್ಯ ಸಂಸ್ಥೆ ಇದೀಗ ಚೀನಾಗೆ ಭೇಟಿ ನೀಡುವ ಸಾಧ್ಯತೆ ದಟ್ಟವಾಗಿದೆ. ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡುವ ಸಾಧ್ಯತೆಯೂ ಇದೆ. ದೇಶದಲ್ಲೂ ಕೊರೊನಾ ವೈರಸ್ ಕಾಣಿಸಿಕೊಂಡಿರುವುದರಿಂದ ಸಾಕಷ್ಟು ಎಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ರಾಜ್ಯದ ಹುಬ್ಬಳ್ಳಿಯಲ್ಲೂ ವ್ಯಕ್ತಿಯೊಬ್ಬನಿಗೆ ಕೊರೊನಾ ವೈರಸ್ ತಗುಲಿರುವ ಶಂಕೆ ವ್ಯಕ್ತವಾಗಿರುವ ಕಾರಣ ಆತನಿಗೆ ಕಿಮ್ಸ್ನಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಮಧ್ಯೆ ಕೇರಳದಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ.