ಇಸ್ಲಮಾಬಾದ್ : ದಿನೇ ದಿನೆ ಪಾಕಿಸ್ತಾನದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಶನಿವಾರ ಕೊರೊನಾ ಸೋಂಕಿತರ ಸಂಖ್ಯೆ 510ಕ್ಕೆ ಏರಿಕೆಯಾಗಿದೆ.
ಇರಾನ್ ಮತ್ತು ಸೌದಿ ಅರೇಬಿಯಾದಿಂದ ಹಿಂದಿರುಗಿದ್ದ ಖೈಬರ್ ಮತ್ತು ಪಖ್ತುನ್ವಾ ಎಂಬ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದ ಎರಡು ದಿನಗಳ ನಂತರ ಕರಾಚಿಯಲ್ಲಿ ಇದೀಗ ಮತ್ತೊಬ್ಬರು ಸಾವನ್ನಪ್ಪಿದ್ದು, ಕೊರೊನಾದಿಂದಾಗಿ ಸಂಭವಿಸಿದ ಮೂರನೇ ಸಾವು ಎಂದು ಶುಕ್ರವಾರ ಪಾಕಿಸ್ತಾನ ದೃಢಪಡಿಸಿದೆ.
ಕರಾಚಿಯಲ್ಲಿ ನಿಧರಾದ 70 ವರ್ಷದ ವ್ಯಕ್ತಿ ಕ್ಯಾನ್ಸರ್ ನಿಂದ ಬದುಕುಳಿದಿದ್ದರು. ಅವರಿಗೆ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಇತರ ವೈದ್ಯಕೀಯ ಸಮಸ್ಯೆಗಳಿದ್ದವು ಆದರೆ ಆ ವ್ಯಕ್ತಿ ಎಲ್ಲೂ ಪ್ರಯಾಣ ಮಾಡಿರಲಿಲ್ಲ ಹಾಗೂ ಯಾರ ಸಂಪರ್ಕವನ್ನು ಮಾಡಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಕೋವಿಡ್-19 ರೋಗಿಗಳ ಸಂಖ್ಯೆ 510ಕ್ಕೆ ಏರಿದ್ದು, ಸಿಂಧ್‌ನಲ್ಲಿ 267 ಪ್ರಕರಣ, ಬಲೂಚಿಸ್ತಾನದಲ್ಲಿ 92, ಪಂಜಾಬ್‌ನಲ್ಲಿ 96, ಕೆ-ಪಿ ಯಲ್ಲಿ 23, ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ 21, ಇಸ್ಲಾಮಾಬಾದ್‌ನಲ್ಲಿ 10 ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ 1 ಪ್ರಕರಣ ಕಂಡು ಬಂದಿದೆ.
ಅಲ್ಲದೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವ ಸಿಂಧ್ ಪ್ರಾಂತ್ಯದಲ್ಲಿ ಶನಿವಾರ ಮತ್ತೆ 15 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಅಲ್ಲಿನ ಆರೋಗ್ಯ ಸಚಿವರು ತಿಳಿಸಿದ್ದಾರೆ. ಇದೀಗ ಕರಾಚಿಯ ಎಕ್ಸ್‌ಪೋ ಕೇಂದ್ರವನ್ನು ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ.
ಹೆಚ್ಚಿನ ಮುಂಜಾಗ್ರತೆ ವಹಿಸಿರುವ ಅಧಿಕಾರಿಗಳು ದೇಶೀಯ ವಿಮಾನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು ಕರಾಚಿ ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಲಾಗುತ್ತಿದೆ.
ಕೊರೊನಾ ಹರಡುವ ಭೀತಿಯಿಂದಾಗಿ ಇಸ್ಲಾಮಾಬಾದ್ ಹೈಕೋರ್ಟ್ ರಾವಲ್ಪಿಂಡಿಯ ಜೈಲಿನಲ್ಲಿ ಸಣ್ಣ ಅಪರಾಧಗಳನ್ನ ಎಸಗಿ ಬಂಧಿತರಾಗಿರುವ ವಿಚಾರಣಾಧೀನ ಕೈದಿಗಳನ್ನು ಬಿಡುಗಡೆ ಮಾಡಲು ಆದೇಶಿಸಿದೆ. ಅಲ್ಲದೇ ಸಣ್ಣ-ಪುಟ್ಟ ವಿಷಯಗಳಲ್ಲಿ ಅಪರಾಧವೆಸಗಿದವರನ್ನು ಬಂಧನ ಮಾಡದಂತೆ ಇಸ್ಲಾಮಾಬಾದ್ ಪೊಲೀಸರಿಗೆ ಕೋರ್ಟ್ ನಿರ್ದೇಶನ ನೀಡಿದೆ ಎಂದು ಖಾಸಗಿ ಪತ್ರಿಯೊಂದು ವರದಿಮಾಡಿದೆ.
ಈ ಬಗ್ಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಇಸ್ಲಾಮಾಬಾದ್‌ನಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿ, ಕೊರೊನಾ ವೈರಸ್ ಬಿಕ್ಕಟ್ಟನ್ನು ನಿಭಾಯಿಸಲು ಜನರು ಕನಿಷ್ಠ 45 ದಿನಗಳವರೆಗೆ ಸ್ವಯಂ-ನಿರ್ಬಂಧವನ್ನು ಹೇರಿಕೊಳ್ಳಬೇಕೆಂದು ಜನರಲ್ಲಿ ಮನವಿ ಮಾಡಿದ್ದಾರೆ.