ಕಠ್ಮಂಡು (ನೇಪಾಳ) : ಚೀನಾದ ರಕ್ಷಣಾ ಸಚಿವ ವೀ ಫೆಂಗೆ ಅವರು ಭಾನುವಾರ ನೇಪಾಳಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಪ್ರಧಾನಿ ಕೆ.ಪಿ.ಶರ್ಮಾ ಒಲಿ ಮತ್ತು ಸೇನಾ ಮುಖ್ಯಸ್ಥ ಜನರಲ್ ಪೂರ್ಣ ಚಂದ್ರ ಥಾಪಾ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ ಎಂದು ನೇಪಾಳದ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶರಿಂಗ್ಲಾ ಅವರು ನೇಪಾಳ ಭೇಟಿಯನ್ನು ಮುಕ್ತಾಯಗೊಳಿಸಿದ ಒಂದು ದಿನದ ಬಳಿಕ ಸಚಿವಾಲಯ ಈ ಹೇಳಿಕೆ ಬಿಡುಗಡೆ ಮಾಡಿದೆ. ಚೀನಾ, ನೇಪಾಳದ ಈ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ನಾಳೆ ಮೊದಲಿಗೆ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿಯವರನ್ನು ಭೇಟಿ ಮಾಡಲಿರುವ ವೀ ಫೆಂಗೆ, ಬಳಿಕ ನೇಪಾಳದ ಸೇನಾ ಮುಖ್ಯಸ್ಥ ಜನರಲ್ ಪೂರ್ಣಚಂದ್ರ ಥಾಪಾ ಅವರೊಂದಿಗೆ ಸಭೆ ನಡೆಸಲಿದ್ದಾರೆ.
ನೇಪಾಳದ ರಾಜಕೀಯ ವ್ಯವಹಾರಗಳ ಸೂಕ್ಷ್ಮ ನಿರ್ವಹಣೆಯಲ್ಲಿ ಚೀನಾ ತೊಡಗಿದೆ ಎಂದು ಸ್ಥಳೀಯ ಪತ್ರಿಕೆ ಖಬರ್ ಹುಬ್ ವರದಿ ಮಾಡಿದೆ. ಅಲ್ಲದೆ ನೇಪಾಳದಲ್ಲಿ ಎನ್ಸಿಪಿ ಅವನತಿಯತ್ತ ಸಾಗಿದೆ ಹಾಗಾಗಿ ಚೀನಾದ ರಾಯಭಾರಿ ಹೌ ಯಾಂಕಿ ಸಾಲು ಸಾಲು ರಾಜಕೀಯ ಸಭೆಗಳನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ.
ನವೆಂಬರ್ ಆರಂಭದಲ್ಲಿ ಹೌ ಯಾಂಕಿಯವರು ಪ್ರಧಾನಿ ಒಲಿಯನ್ನು ಭೇಟಿಯಾಗಿ ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು. ಆಡಳಿತ ಪಕ್ಷದ ಏಕೀಕರಣ ಪ್ರಕ್ರಿಯೆ ಮತ್ತು ಪಕ್ಷದೊಳಗೆ ನಡೆಯುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಕುರಿತು ಚರ್ಚಿಸಿದ್ದರು.