ನವದೆಹಲಿ: ವಾಸ್ತವ ಗಡಿ ನಿಯಂತ್ರಣ ರೇಖೆಯ(ಎಲ್‌ಎಸಿ) ಹಲವಾರು ಪ್ರದೇಶಗಳಲ್ಲಿ ಹೀಗಿರುವ ಗ್ರಾಮಗಳ ಹೆಸರು ಬದಲಾಯಿಸುವ ಚೀನಾದ ಕ್ರಮ ಪ್ರಚೋದನಕಾರಿ ಎಂದು ಭಾರತೀಯ ರಕ್ಷಣಾ ಸಚಿವಾಲಯ ಹೇಳಿದೆ.
ಸಚಿವಾಲಯವು ತನ್ನ ವರ್ಷಾಂತ್ಯದ ವಿಮರ್ಶೆಯಲ್ಲಿ, ಎಲ್‌ಎಸಿಯಲ್ಲಿ ಒಂದಕ್ಕಿಂತ ಹೆಚ್ಚು ಪ್ರದೇಶಗಳಲ್ಲಿ ಯಥಾಸ್ಥಿತಿಯನ್ನು ಬದಲಾಯಿಸಲು ಚೀನಾ ಏಕಪಕ್ಷೀಯ ಮತ್ತು ಪ್ರಚೋದನಕಾರಿ ಕ್ರಮಕ್ಕೆ ಮುಂದಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ಉಭಯ ದೇಶಗಳ ಸೇನೆಗಳು ವಿವಿಧ ಹಂತಗಳಲ್ಲಿ ಮಾತುಕತೆಯಲ್ಲಿ ತೊಡಗಿವೆ.
ನಿರಂತರ ಜಂಟಿ ಪ್ರಯತ್ನಗಳ ನಡುವೆಯೂ ಅನೇಕ ಸ್ಥಳಗಳಲ್ಲಿ ಅನಿಶ್ಚಿತತೆಗಳು ಮುಂದುವರೆದಿವೆ. ಇಂತಹ ಪ್ರದೇಶಗಳಲ್ಲಿ ತಮ್ಮ ಸೇನಾ ಬಲ ಸಮರ್ಪಕವಾಗಿ ಹೆಚ್ಚಿಸಲಾಗಿದೆ ಎಂದು ಸಚಿವಾಲಯ ವಿವರಿಸಿದೆ.
ಮೂಲ ಸೌಕರ್ಯ ಅಭಿವೃದ್ಧಿ ಮುಂದುವರಿಕೆ
ಭಾರತದ ಹಕ್ಕುಗಳನ್ನು ಗೌರವಿಸಿದಾಗ ತಮ್ಮ ಭದ್ರತಾ ಪಡೆಗಳು ಚೀನಾದ ಸೈನಿಕರೊಂದಿಗೆ ದೃಢ ಹಾಗೂ ಶಾಂತಿಯುತವಾಗಿ ವ್ಯವಹರಿಸುವುದನ್ನು ಮುಂದುವರೆಸುತ್ತವೆ.
ರಸ್ತೆಗಳು, ಸರ್ವಋತು ಸಂಪರ್ಕಕ್ಕಾಗಿ ಸುರಂಗಗಳು, ನಾಲ್ಕು ಆಯಕಟ್ಟಿನ ರೈಲು ಮಾರ್ಗಗಳು, ಬ್ರಹ್ಮಪುತ್ರಕ್ಕೆ ಅಡ್ಡಲಾಗಿ ಹೆಚ್ಚುವರಿ ಸೇತುವೆಗಳು, ಮೇಲ್ದರ್ಜೆಗೇರಿಸುವಿಕೆ ಸೇರಿದಂತೆ ಉತ್ತರದ ಗಡಿಯಲ್ಲಿನ ಮೂಲಸೌಕರ್ಯಗಳ ಉನ್ನತೀಕರಣ ಮತ್ತು ಅಭಿವೃದ್ಧಿಯನ್ನು ಸಮಗ್ರ ರೀತಿಯಲ್ಲಿ ನಡೆಸಲಾಗುತ್ತಿದೆ ಎಂದು ಸಚಿವಾಲಯ ಹೇಳಿದೆ.
ನಿರ್ಣಾಯಕ ಇಂಡೋ - ಚೀನಾ ಗಡಿ ರಸ್ತೆಗಳಲ್ಲಿ ಸೇತುವೆಗಳು ಮತ್ತು ಸರಬರಾಜು, ಇಂಧನ ಮತ್ತು ಯುದ್ಧಸಾಮಗ್ರಿಗಳ ಸಂಗ್ರಹಣೆ. ದ್ವಿ-ಬಳಕೆಯ ಮೂಲಸೌಕರ್ಯಗಳನ್ನು ಗುರುತಿಸಲು ಪ್ರಮುಖ ಪ್ರಯತ್ನಗಳನ್ನು ಸಹ ಕೈಗೊಳ್ಳಲಾಗಿದೆ ಎಂದು ಹೇಳಿದೆ.
ಪೂರ್ವ ಲಡಾಖ್‌ನಲ್ಲಿ ನಡೆದಿದ್ದ ಘರ್ಷಣೆ ಬಳಿಕ ಗಡಿಯಲ್ಲಿ ಯಥಾಸ್ಥಿತಿಯನ್ನು ತಕ್ಷಣ ಮರುಸ್ಥಾಪಿಸುವ ಭಾರತದ ನಿಲುವಿಗೆ ಧಕ್ಕೆಯಾಗದಂತೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಭಾರತ - ಚೀನಾ ನಡುವೆ ಹಲವಾರು ಸುತ್ತಿನ ಮಾತುಕತೆಗಳು ನಡೆದಿವೆ ಎಂದು ಸಚಿವಾಲಯವು ಗಮನಸೆಳೆದಿದೆ. ಈ ನಿಟ್ಟಿನಲ್ಲಿ ಈಗಾಗಲೇ 13 ಸುತ್ತಿನ ಹಿರಿಯ ಸೇನಾ ಕಮಾಂಡರ್‌ಗಳ ಸಭೆಗಳು ಮುಕ್ತಾಯವಾಗಿವೆ. ಕಳೆದ 20 ತಿಂಗಳಿನಿಂದ ಮತ್ತೆ ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ಪಾರದರ್ಶಕತೆ ಇಲ್ಲದೇ ಆಯ್ದ ಭಾರತೀಯರಿಗೆ ತೇರಿ ದೇವಸ್ಥಾನ ದರ್ಶನಕ್ಕೆ ಪಾಕ್ ಆಹ್ವಾನ; ಕೇಂದ್ರ ಸರ್ಕಾರ ತಿರಸ್ಕಾರ