ಬೀಜಿಂಗ್ (ಚೀನಾ): ಅಮೆರಿಕ - ಚೀನಾ ನಡುವಿನ ಸಂಬಂಧದ ಬಿರುಕಿನಿಂದ ಹವಾಮಾನ ಬದಲಾವಣೆಯ ಮೇಲೆ ಪರಿಣಾಮ ಬೀರಬಹುದು ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅಮೆರಿಕದ ಹವಾಮಾನ ರಾಯಭಾರಿ ಜಾನ್ ಕೆರ್ರಿಗೆ ಎಚ್ಚರಿಕೆ ನೀಡಿದ್ದಾರೆ.
ಕೆರ್ರಿಗೆ ವಿಡಿಯೋವೊಂದನ್ನು ಕಳಿಸಿರುವ ವಾಂಗ್ ಯಿ, ಉಭಯ ರಾಷ್ಟ್ರಗಳ ನಡುವಿನ ಸಹಕಾರ ಸಂಬಂಧವನ್ನು ಬೇರ್ಪಡಿಸುವುದು ಸಾಧ್ಯವಿಲ್ಲ. ಸಂಬಂಧಗಳನ್ನು ಸುಧಾರಿಸಲು ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದ್ದಾರೆ. ಈ ಕುರಿತು ಚೀನಾ ವಿದೇಶಾಂಗ ಸಚಿವಾಲಯ ಪ್ರಕಟಣೆ ಹೊರಡಿಸಿದೆ.
ಚೀನಾದ ನಗರವಾದ ಟಿಯಾನ್ಜಿನ್ನಲ್ಲಿ ಹವಾಮಾನ ಕುರಿತಾದ ಮಾತುಕತೆ ನಡೆಯಲಿದ್ದು, ಈ ಸಭೆಯಲ್ಲಿ ಅಮೆರಿಕ ಹಾಗೂ ಡ್ರ್ಯಾಗನ್ ರಾಷ್ಟ್ರ ಪ್ರಮುಖ ಪಾತ್ರ ವಹಿಸಲಿವೆ. ಹವಾಮಾನ ಬದಲಾವಣೆಯನ್ನು ಎದುರಿಸುವ ಪ್ರಯತ್ನದ ಭಾಗವಾಗಿ ಈ ಸಭೆ ನಡೆಯಲಿದೆ. ಚೀನಾ ವಿಶ್ವದ ಅತಿದೊಡ್ಡ ಹಸಿರು ಮನೆ ಅನಿಲಗಳನ್ನು ಹೊರಸೂಸುವ ದೇಶವಾಗಿದೆ.
ವ್ಯಾಪಾರ, ತಂತ್ರಜ್ಞಾನ, ಮಾನವ ಹಕ್ಕುಗಳ ವಿವಾದಗಳಿಂದ ಅಮೆರಿಕ - ಚೀನಾ ಬಾಂಧವ್ಯ ಹದಗೆಟ್ಟಿದೆ. ಈ ಮಧ್ಯೆ ಹವಾಮಾನ ಬದಲಾವಣೆಯಂತಹ ಪ್ರದೇಶಗಳಲ್ಲಿ ನಾವು ಸಾಮಾನ್ಯ ಹಿತಾಸಕ್ತಿಗಳನ್ನು ಹಂಚಿಕೊಳ್ಳುತ್ತೇವೆ. ಎರಡೂ ಕಡೆಯವರು ಪರಸ್ಪರ ಗೌರವದ ಆಧಾರದ ಮೇಲೆ ಸಂವಾದ ಮತ್ತು ಸಂವಹನ ಮಾಡಬೇಕಿದೆ. ಈ ಸಭೆಯಿಂದ ಉಭಯ ರಾಷ್ಟ್ರಗಳಿಗೆ ಲಾಭವಾಗಬೇಕೆಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಹೇಳಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾದಲ್ಲಿ ಆಹಾರೋತ್ಪನ್ನಗಳ ಬೆಲೆ ಗಗನಕ್ಕೆ: ಆರ್ಥಿಕ ತುರ್ತುಪರಿಸ್ಥಿತಿ ಘೋಷಿಸಿದ ಸರ್ಕಾರ
ವಿಶ್ವದಲ್ಲಿಯೇ ಅತಿ ಹೆಚ್ಚು ಕಲ್ಲಿದ್ದಲನ್ನು ಚೀನಾ ಬಳಸಲಿದ್ದು, ಶೇಕಡಾ 60 ರಷ್ಟು ಶಕ್ತಿಯನ್ನು ಕಲ್ಲಿದ್ದಲಿನಿಂದಲೇ ಪಡೆಯುತ್ತದೆ. ಜತೆಗೆ ವಿಶ್ವದ ಹಸಿರುಮನೆ ಅನಿಲಗಳ ಅತಿ ದೊಡ್ಡ ಮೂಲವಾಗಿದೆ. ಇದು ಕಲ್ಲಿದ್ದಲಿನ ಅತಿ ಹೆಚ್ಚು ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಲು ಯೋಜಿಸಿದೆ.
ಕೈಗಾರಿಕಾ ಪೂರ್ವ ಮಟ್ಟಕ್ಕಿಂತ ಹೆಚ್ಚುತ್ತಿರುವ ತಾಪಮಾನವನ್ನು 1.5 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗದಂತೆ ತಡೆಯಲು ಕೆರ್ರಿ ಬಲವಾದ ಪ್ರಯತ್ನಗಳಿಗೆ ಕರೆ ನೀಡಿದ್ದಾರೆ. ಇಂಗಾಲದ ಹೊರಸೂಸುವಿಕೆಯನ್ನು ತುರ್ತಾಗಿ ಕಡಿತಗೊಳಿಸುವ ನಿಟ್ಟಿನಲ್ಲಿ ಅಮೆರಿಕದೊಂದಿಗೆ ಕೈ ಜೋಡಿಸಿ ಎಂದು ಚೀನಾಗೆ ಕರೆ ಕೆರ್ರಿ ಕರೆ ನೀಡಿದ್ದಾರೆ.