ಕಠ್ಮಂಡು (ನೇಪಾಳ): ಆರ್ಥಿಕವಾಗಿ ದುರ್ಬಲವಾಗಿರುವ ರಾಷ್ಟ್ರಗಳ ಭ್ರಷ್ಟ ನಾಯಕರನ್ನು ಗಾಳಕ್ಕೆ ಬೀಳಿಸಿ ಆ ಮೂಲಕ ರಾಷ್ಟ್ರವನ್ನು ಕಬಳಿಸುವ ಹುನ್ನಾರ ಚೀನಾ ದೇಶದ್ದಾಗಿದೆ. ನೇಪಾಳವು ಇಂಥ ಕುತಂತ್ರದ ಒಂದು ಉದಾಹರಣೆ ಮಾತ್ರವಾಗಿದೆ ಎಂದು ಗ್ಲೋಬಲ್ ವಾಚ್ ಅನಾಲಿಸಿಸ್ ವರದಿ ಹೇಳಿದೆ.
ವರದಿಯನ್ನು ಸಿದ್ಧಪಡಿಸಿದ ಸಂಶೋಧಕ ರೋಲ್ಯಾಂಡ್ ಜಾಕ್ವಾರ್ಡ್, "ಇದು ಚೀನಾದ ಕಂಪನಿಗಳಿಗೆ ಆ ದೇಶದಲ್ಲಿ ತಮ್ಮ ವ್ಯಾಪಾರ ಹಿತಾಸಕ್ತಿಗಳನ್ನು ಹೆಚ್ಚಿಸಲು ಮಾತ್ರವಲ್ಲದೆ, ರಾಷ್ಟ್ರದ ರಾಜಕೀಯವನ್ನು ರಹಸ್ಯವಾಗಿ ಭೇದಿಸಲು ಹಾಗೂ ಅದರ ದೀರ್ಘಕಾಲೀನ ಪ್ರಭಾವವನ್ನು ಖಚಿತಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ." ಎಂದು ವಿವರಿಸಿದ್ದಾರೆ.
ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರ ಸಂಪತ್ತು ಹೆಚ್ಚಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ನೇಪಾಳದ ಕಮ್ಯುನಿಸ್ಟ್ ಪಕ್ಷದ ಮುಖಂಡರಾದ ಒಲಿ ವಿದೇಶದಲ್ಲಿ ಹಣ ಸಂಗ್ರಹಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈಗಿನ ಪರಿಸ್ಥಿತಿಯಲ್ಲಿ ಚೀನಾ ನೇಪಾಳದ ಮೇಲೆ ನಿರಂತರವಾಗಿ ಅತಿಕ್ರಮಣ ಮಾಡುತ್ತಿದ್ದು, ಅತಿರೇಕದ ಭ್ರಷ್ಟಾಚಾರದಿಂದ ಕೆ.ಪಿ. ಶರ್ಮಾ ಒಲಿ ಚೀನಾ ಹಣದ ಫಲಾನುಭವಿಗಳಾಗಿದ್ದಾರೆ ಎಂದು ವರದಿ ತಿಳಿಸಿದೆ. ಚೀನಾದ ಕಂಪನಿಗಳಿಗೆ ಅಕ್ರಮವಾಗಿ ಯೋಜನೆಗಳನ್ನು ನೀಡುವ ಮೂಲಕ ಒಲಿ, ಸರ್ಕಾರದ ನಿಯಮಗಳನ್ನು ಕೂಡ ಮೀರಿದ್ದಾರೆ ಎಂದು ವರದಿ ತಿಳಿಸಿದೆ.