ಬೀಜಿಂಗ್: ಭಾರತದ ಪೂರ್ವ ಲಡಾಖ್ ಸಮೀಪವಿರುವ ಚೀನಾದ ಕ್ಸಿನ್‌ಜಿಯಾಂಗ್ ಮಿಲಿಟರಿ ಜಿಲ್ಲೆಯ ಎತ್ತರದ ಪ್ರದೇಶದಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿಯು (ಪಿಎಲ್‌ಎ) ನೈಟ್ ಡ್ರಿಲ್ ಸೇರಿದಂತೆ ಸೇನಾ ಸಮರಾಭ್ಯಾಸವನ್ನು ಹೆಚ್ಚಿಸಿದೆ.
ಹಾಂಗ್ ಕಾಂಗ್ ಮೂಲದ ಆಂಗ್ಲ ಭಾಷೆಯ ದಿನಪತ್ರಿಕೆಯಾದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ಭಾನುವಾರ ಪ್ರಕಟಿಸಿದ ವರದಿಯಿಂದಾಗಿ ಈ ಮಾಹಿತಿ ಬೆಳಕಿಗೆ ಬಂದಿದೆ. ರಾತ್ರಿ ವೇಳೆ ಸುಮಾರು 5,000 ಮೀಟರ್ (16,400 ಅಡಿ) ಎತ್ತರದ ಪ್ರದೇಶದಲ್ಲಿ ಲೈವ್-ಫೈರ್ ಮಷಿನ್ ಗನ್ ಡ್ರಿಲ್‌ಗಳನ್ನು ಪಿಎಲ್‌ಎ ಅಭ್ಯಾಸ ಮಾಡುತ್ತಿದೆ ಎಂದು ಎಸ್‌ಸಿಎಂಪಿ ವರದಿ ಮಾಡಿದೆ.
ಇದನ್ನೂ ಓದಿ: ಅಮೆರಿಕ ನೇತೃತ್ವದಲ್ಲಿ ಕ್ವಾಡ್ ಶೃಂಗಸಭೆ: ಚೀನಾ ತೀವ್ರ ಖಂಡನೆ
ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದ ಇನ್ನೂ ಸಂಪೂರ್ಣವಾಗಿ ಬಗೆಹರಿದಿಲ್ಲ. ಇದರ ನಡುವೆ ತನ್ನ ಸೇನೆಗೆ ಚೀನಾ ಅತ್ಯಾಧುನಿಕ ಆಯುಧಗಳು ಮತ್ತು ಸಲಕರಣೆಗಳನ್ನು ಪರಿಚಯಿಸುತ್ತಿದ್ದು, ಉನ್ನತ ಮಟ್ಟದ ತರಬೇತಿ ನೀಡುತ್ತಿದೆ ಎಂದು ಹೇಳಲಾಗ್ತಿದೆ.
"ನಾವು ನಮ್ಮ ವೇಳಾಪಟ್ಟಿಯನ್ನು ಪರಿಷ್ಕರಿಸಿದ್ದೇವೆ ಮತ್ತು ಸೈನಿಕರಿಗೆ ಉನ್ನತ ಮಟ್ಟದ ತರಬೇತಿಗಾಗಿ ಉನ್ನತ ಮಾನದಂಡಗಳನ್ನು ಪೂರೈಸಲು ಬೇಡಿಕೆ ಇಟ್ಟಿದ್ದೇವೆ. ಏಕೆಂದರೆ ಬಾಹ್ಯ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಸವಾಲುಗಳ ನಡುವೆ ನಾವು ಕಠಿಣ ಯುದ್ಧಭೂಮಿಯ ವಾತಾವರಣವನ್ನು ಎದುರಿಸಬೇಕಾಗುತ್ತದೆ" ಎಂದು ಕಮಾಂಡರ್ ಯಾಂಗ್ ಯಾಂಗ್ ಹೇಳಿರುವುದಾಗಿ ಎಸ್‌ಸಿಎಂಪಿ ವರದಿ ಮಾಡಿದೆ.