ಇಸ್ಲಾಮಾಬಾದ್: ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಪಾಕಿಸ್ತಾನದ ಬೆನ್ನಿಗೆ ನಿಂತಿರುವ ಚೀನಾ, ವೈದ್ಯಕೀಯ ಸಿಬ್ಬಂದಿ ಮತ್ತು ಸಾಮಗ್ರಿಗಳನ್ನು ತುಂಬಿದ ವಿಮಾನವನ್ನು ಕಳುಹಿಸಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಪಾಕಿಸ್ತಾನದಲ್ಲಿ ಪ್ರಸ್ತುತ ಸಾವಿರದ 500ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. 10 ಜನರು ಈ ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಸೋಂಕಿತ ಜನರಲ್ಲಿ ಹೆಚ್ಚಿನವರು ನೆರೆಯ ಇರಾನ್‌ನಿಂದ ವಾಪಸ್ ಆದ ಪ್ರಯಾಣಿಕರಾಗಿದ್ದಾರೆ ಎಂದು ಹೇಳಲಾಗಿದೆ.
ಈಗಾಗಲೇ ಪಾಕಿಸ್ತಾನವು ಇರಾನ್ ಮತ್ತು ಅಫ್ಘಾನಿಸ್ತಾನಗಳೊಂದಿಗಿನ ತನ್ನ ಗಡಿಗಳನ್ನು ಮುಚ್ಚಿದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ದೇಶದಲ್ಲಿ ಲಾಕ್ಡೌನ್ ಘೋಷಣೆ ಮಾಡಲು ಸಾಧ್ಯವಿಲ್ಲ ಎಂದಿದ್ದರು. ಆದರೆ, ಅನಿವಾರ್ಯವಲ್ಲದ ಕೆಲವು ಸೇವೆಗಳನ್ನು ದೇಶದಲ್ಲಿ ಮುಚ್ಚುವಂತೆ ಅದೇಶಿಸಲಾಗಿದೆ.
ದಕ್ಷಿಣ ಮತ್ತು ಮಧ್ಯ ಏಷ್ಯಾವನ್ನು ಚೀನಾದೊಂದಿಗೆ ಸಂಪರ್ಕಿಸುವ ಚೀನಾದ ಮಹತ್ವಾಕಾಂಕ್ಷೆಯ ರಸ್ತೆ ಯೋಜನೆಯಲ್ಲಿ ಪಾಕಿಸ್ತಾನ ಪ್ರಮುಖ ಕೊಂಡಿಯಾಗಿದೆ. ಪರಮಾಣು ಸಿಡಿತಲೆಗಳನ್ನು ಸಾಗಿಸುವ ಸಾಮರ್ಥ್ಯವಿರುವ ಕ್ಷಿಪಣಿಗಳನ್ನು ಪಾಕ್‌ಗೆ ಪೂರೈಸಿದ ಚೀನಾ ಪರಮಾಣು ಶಸ್ತ್ರಸಜ್ಜಿತ ಪಾಕಿಸ್ತಾನದ ಪ್ರಮುಖ ಮಿಲಿಟರಿ ಪೂರೈಕೆದಾರನಾಗಿದೆ.