ಬೀಜಿಂಗ್ (ಚೀನಾ): ಅಫ್ಘಾನಿಸ್ತಾನದೊಂದಿಗೆ ಸ್ನೇಹ ಮತ್ತು ಸಹಕಾರವನ್ನು ಗಾಢವಾಗಿಸಲು ನಾವು ಸಿದ್ಧರಿದ್ದೇವೆ ಎಂದು ಚೀನಾದ ಸರ್ಕಾರಿ ವಕ್ತಾರರೊಬ್ಬರು ಹೇಳಿದ್ದಾರೆ. ಅಫ್ಘಾನಿಸ್ತಾನವನ್ನು ತಾಲಿಬಾನ್ ಕೈ ವಶ ಮಾಡಿಕೊಂಡ ಬಳಿಕ ಡ್ರ್ಯಾಗನ್ ರಾಷ್ಟ್ರ ಈ ಹೇಳಿಕೆ ನೀಡಿದೆ.
ಅಮೆರಿಕ ಸೇನೆ ಹಿಂತೆಗೆದುಕೊಂಡ ಬಳಿಕ ಚೀನಾವು ಅಘ್ಘಾನ್ನೊಂದಿಗೆ ಸ್ನೇಹ ಬೆಳೆಸಲು ಮುಂದಾಗಿದೆ. ಚೀನಾ ಅಫ್ಘಾನಿಸ್ತಾನದೊಂದಿಗೆ 76 ಕಿಲೋಮೀಟರ್ (47 ಮೈಲಿ) ಗಡಿ ಹಂಚಿಕೊಂಡಿದೆ. ಕ್ಸಿನ್ ಜಿಯಾಂಗ್ನಲ್ಲಿ ಮುಸ್ಲಿಂ ಅಲ್ಪಸಂಖ್ಯಾತ ಉಯ್ಘರ್ ಪ್ರತ್ಯೇಕತಾವಾದಿಗಳಿಗೆ ಅಫ್ಘಾನಿಸ್ತಾನ ಒಂದು ವೇದಿಕೆಯಾಗಬಹುದು ಎಂದು ಬೀಜಿಂಗ್ ಬಹಳ ಹಿಂದಿನಿಂದಲೂ ಹೆದರುತ್ತಿತ್ತು.
ಆದರೆ, ಕಳೆದ ತಿಂಗಳ ಹಿಂದೆ ತಾಲಿಬಾನ್ನ ಉನ್ನತ ನಿಯೋಗವು ಟಿಯಾನ್ಜಿನ್ನಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾಗಿ, ಅಫ್ಘಾನಿಸ್ತಾನವನ್ನು ಉಗ್ರಗಾಮಿಗಳ ನೆಲೆಯಾಗಿ ಬಳಸುವುದಿಲ್ಲ ಎಂದು ಭರವಸೆ ನೀಡಿತ್ತು ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಅಫ್ಘಾನಿಸ್ತಾನದ ಪುನರ್ನಿರ್ಮಾಣಕ್ಕಾಗಿ ಚೀನಾ ಆರ್ಥಿಕ ಬೆಂಬಲ, ಸಹಕಾರ ನೀಡಿತು.
ತನ್ನ ಭೌಗೋಳಿಕ- ಕಾರ್ಯತಂತ್ರದ ಭಾಗವಾಗಿ ಅಫ್ಘಾನ್ನೊಂದಿಗೆ ಸಂಬಂಧವನ್ನು ಗಟ್ಟಿಗೊಳಿಸಲು ನಾವು ಸಿದ್ಧರಿದ್ದೇವೆ ಎಂದು ಚೀನಾ ಹೇಳಿಕೆ ನೀಡಿದೆ. ತಾಲಿಬಾನ್ ಪದೇ ಪದೆ ಚೀನಾದೊಂದಿಗೆ ಉತ್ತಮ ಸಂಬಂಧ ಬೆಳೆಸುವ ಭರವಸೆ ವ್ಯಕ್ತಪಡಿಸಿದೆ. ಅಫ್ಘಾನಿಸ್ತಾನದ ಪುನರ್ ನಿರ್ಮಾಣ ಮತ್ತು ಅಭಿವೃದ್ಧಿಯಲ್ಲಿ ಚೀನಾದ ಭಾಗವಹಿಸುವಿಕೆಯನ್ನು ಎದುರು ನೋಡುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನಿಂಗ್ ಹೇಳಿದ್ದಾರೆ.
ತಾಲಿಬಾನ್ನ ಈ ನಿರ್ಧಾರವನ್ನು ನಾನು ಸ್ವಾಗತಿಸುತ್ತೇವೆ. ಅಫ್ಘಾನ್ ಜನರ ಹಕ್ಕನ್ನು ಸ್ವತಂತ್ರವಾಗಿ ನಿರ್ಧರಿಸುವ ಹಕ್ಕನ್ನು ಚೀನಾ ಗೌರವಿಸುತ್ತದೆ. ಅಫ್ಘಾನ್ ಜತೆ ಸ್ನೇಹ ಮತ್ತು ಸಹಕಾರಿ ಸಂಬಂಧಗಳನ್ನು ಮುಂದುವರಿಸಲು ಚೀನಾ ಸಿದ್ಧವಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ವಿಮಾನದಿಂದ ಜಾರಿಬಿದ್ದ ಅಫ್ಘಾನ್ ಪ್ರಜೆಗಳು..ಭಯಾನಕ ವಿಡಿಯೋ!
ನಿನ್ನೆಯಷ್ಟೇ ಎಲ್ಲ ದೇಶಗಳ ರಾಯಭಾರ ಕಚೇರಿಗಳು ಸ್ಥಳಾಂತರಗೊಂಡಿವೆ. ಆದರೆ, ಕಾಬೂಲ್‌ನಲ್ಲಿರುವ ಚೀನಾದ ರಾಯಭಾರ ಕಚೇರಿಯು ಕಾರ್ಯನಿರ್ವಹಿಸುತ್ತಿದೆ ಎಂದು ಹುವಾ ಹೇಳಿದರು. ಅಲ್ಲದೇ, ಕಳೆದ ಕೆಲ ತಿಂಗಳ ಹಿಂದಿನಿಂದಲೇ ಚೀನಾ ನಾಗರಿಕರನ್ನು ಕಾಬೂಲ್ನಿಂದ ಸ್ಥಳಾಂತರಗೊಳಿಸುವ ಪ್ರಕ್ರಿಯೆ ನಡೆದಿದೆ. ಇನ್ನೂ ಅಲ್ಲಿಯೇ ಉಳಿದಿರುವ ಚೀನೀ ಪ್ರಜೆಗಳು ಮನೆಯಲ್ಲಿಯೇ ಇರುವಂತೆ ರಾಯಭಾರ ಕಚೇರಿ ಸೂಚಿಸಿದೆ ಎಂದು ಅವರು ತಿಳಿಸಿದ್ದಾರೆ.