ಬೀಜಿಂಗ್: ಕಳೆದ ಡಿಸೆಂಬರ್ನಲ್ಲಿ ಚೀನಾಗೆ ವಕ್ಕರಿಸಿಕೊಂಡ ಕೊರೊನಾ ಮಹಾಮಾರಿ ಈವರೆಗೆ ಸಾವಿರಾರು ಜನರನ್ನು ಬಲಿಪಡೆದುಕೊಂಡಿದೆ. ಜನವರಿ ತಿಂಗಳಿನಿಂದ ಸಾವು ನೋವಿನ ಅಂಕಿ -ಅಂಶಗಳನ್ನು ಬಿಡುಗಡೆ ಮಾಡಿರುವ ಚೀನಾದಲ್ಲಿ, ನಿನ್ನೆ ಮೊದಲ ಬಾರಿಗೆ ಯಾವುದೇ ಹೊಸ ಸೋಂಕಿತ ಸಾವು ವರದಿಯಾಗಿಲ್ಲ ಎಂದು ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಕೊರೊನಾ ಪೀಡಿತ ಚೀನಾದ ಮುಖ್ಯ ಭೂಭಾಗದಲ್ಲಿನ ಮಾರ್ಚ್‌ನಿಂದ ಪ್ರಕರಣಗಳು ಕಡಿಮೆಯಾಗುತ್ತಿವೆ. ಆದರೆ ವಿದೇಶಿಗರಿಂದಾಗಿ ದೇಶದಲ್ಲಿ ಎರಡನೇ ಹಂತದ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಈವರೆಗೆ ವಿದೇಶಿ ಪ್ರಜೆಗಳಿಂದಾಗಿ ಒಟ್ಟು 1,000 ಸೋಂಕಿತ ಪ್ರಕರಣಗಳನ್ನು ಇಲ್ಲಿನ ಆರೋಗ್ಯ ಅಧಿಕಾರಿಗಳು ವರದಿ ಮಾಡಿದ್ದಾರೆ.
ನಿನ್ನೆ ಚೀನಾದದಲ್ಲಿ 32 ಹೊಸ ಪಾಸಿಟಿವ್ ಪ್ರಕರಣಗಳನ್ನು ಆರೋಗ್ಯಾಧಿಕಾರಿಗಳು ವರದಿ ಮಾಡಿದ್ದು, ಇವೆಲ್ಲವೂ ವಿದೇಶಿ ಪ್ರಜೆಗಳಿಂದಾದ ಪ್ರಕರಣ ಎಂದು ತಿಳಿಸಿದ್ದಾರೆ
ಈವರೆಗೆ ಚೀನಾದಲ್ಲಿ ಕೊರೊನಾದಿಂದಾಗಿ 3,331 ಜನ ಸಾವನ್ನಪ್ಪಿದ್ದು, ಒಟ್ಟು 81,740 ಜನರಿಗೆ ಸೋಂಕು ಬಾಧಿಸಿದೆ.