ನವದೆಹಲಿ: ಗಡಿಯಲ್ಲಿ ಚೀನಾದ ಅಕ್ರಮಣಕಾರಿ ಕುರಿತ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆಗೆ ಚೀನಾ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದ್ದು, ಭಾರತ ಈ ಕೂಡಲೇ ತನ್ನ ತಪ್ಪು ಅಭ್ಯಾಸಗಳನ್ನು ಸರಿಪಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಭಾರತ-ಚೀನಾ ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯನ್ನು ತಹಬದಿಗೆ ತರಬೇಕು ಎಂದು ಹೇಳಿದ್ದಾರೆ.
ವಿದೇಶಾಂಗ ಸಚಿವ ವಾಂಗ್ ಯಿ ಅವರ ಹೇಳಿಕೆ ಆಧರಿಸಿ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ವಾಸ್ತವ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ) ಯಲ್ಲಿನ ಪರಿಸ್ಥಿತಿಯ ಬಗ್ಗೆ ಚೀನಾಗೆ ಅರಿವಿದೆ. ಕಳೆದ ಮೇ ತಿಂಗಳಿನಿಂದಲೂ ಪೂರ್ವ ಲಡಾಖ್‌ನಲ್ಲಿ ಉಂಟಾಗಿರುವ ಪರಿಸ್ಥಿತಿ ನಿಯಂತ್ರಿಸಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ತಿಳಿಸಿದ್ದಾರೆ ಎಂದು ಹೇಳಿದೆ.
ಭಾರತ, ಚೀನಾ ನಡುವೆ ಗಡಿಯಲ್ಲಿ ಇತ್ತೀಚೆಗೆ ಉಂಟಾಗಿರುವ ಪರಿಸ್ಥಿತಿಗೆ ಚೀನಾ ಜವಾಬ್ದಾರಿಯಲ್ಲ. ಭಾರತವೇ ಮೊದಲು ದ್ವಿಪಕ್ಷೀಯ ಒಪ್ಪಂದವನ್ನು ಉಲ್ಲಂಘಿಸಿದೆ. ಪ್ರಚೋದನಾಕಾರಿ ನಡೆಯಿಂದ ಕಾನೂನು ಬಾಹಿರವಾಗಿ ಗಡಿದಾಟಿ ಬಂದಿದೆ. ಗುಂಡು ಹಾರಿಸುವ ಮೂಲಕ ಗಡಿಯಲ್ಲಿನ ಚೀನಾ ಸೈನಿಕರಿಗೆ ಬೆದರಿಕೆ ಹಾಕಿದೆ ಎಂದು ವಾಂಗ್ ಆರೋಪಿಸಿದ್ದಾರೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ಗಡಿಯಲ್ಲಿ ಚೀನಾದ ಅಕ್ರಮಣಕಾರಿ ನೀತಿಯ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕಸಭೆಗೆ ಹೇಳಿಕೆ ನೀಡಿದ್ದರು. ಚೀನಾ ನೆರೆಯ ದೇಶಗಳೊಂದಿಗೆ ಗಡಿ ಉಲ್ಲಂಘನೆ ಮಾಡುವ ಮೂಲಕ 1993 ಮತ್ತು 1996ಗಡಿ ಒಪ್ಪಂದಗಳನ್ನು ಉಲ್ಲಂಘಿಸಿದೆ. ಇದು ಚೀನಾದ ಮತ್ತೊಂದು ಸಂಶಯಾಸ್ಪದ ಪ್ರಚಾರವಾಗಿದೆ ಎಂದು ಕಲಾಪಕ್ಕೆ ಹೇಳಿದ್ದರು.